ಮಾರ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ್ದ ಬೆಳೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಸನ್ಮಾನಿಸಲಾಯಿತು. ಜಪಮಾಲೆ, ಧರ್ಮರಾಜ್, ಮಾಹಾದೇವ, ಪುಷ್ಪಾ ಇತರರಿದ್ದರು. 
ರಾಜ್ಯ

ರೈತರು ಕೃಷಿ ಸಾಲ ಸದ್ಬಳಕೆ ಮಾಡಿಕೊಳ್ಳಲಿ

ಹನೂರು: ನೀಡುವ ಸಾಲವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಮಾಜಿ ಶಾಸಕ ಹಾಗೂ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ನರೇಂದ್ರ ಸಲಹೆ ನೀಡಿದರು.


ತಾಲೂಕಿನ ಮಾರ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಸೋಮವಾರ ಆಯೋಜಿಸಿದ್ದ ಕೆಸಿಸಿ ಬೆಳೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದರು.

ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ಸಂಘದ ಸದ್ಯರಿಗೆ ಕೆಸಿಸಿ ಬೆಳೆ ಸಾಲ ವಿತರಿಸಲಾಗುತ್ತಿದೆ. ಈ ಬಾರಿ 111 ರೈತರಿಗೆ ಸಾಲವನ್ನು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು. ಪ್ರತಿಯೊಬ್ಬರೂ ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಮರುಪಾವತಿಸುವುದರ ಮೂಲಕ ಸಂಘದಿಂದ ಇನ್ನು ಹೆಚ್ಚಿನ ಸೌಕರ್ಯ ಪಡೆಯಬೇಕು. ಸಂಘದ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ದೊರಕಿಸಿ ಕೊಡಬೇಕು. ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಮಾಜಿ ಶಾಸಕರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಜಪಮಾಲೆ, ಧರ್ಮರಾಜ್, ಭೂಪಾಲ್, ಮಹಾದೇವ, ಪೌಲ್‌ರಾಜ್, ಗೋವಿಂದನ್, ಸೇಸುರಾಜ್, ಪುಷ್ಪಾ ಇತರರು ಇದ್ದರು.