ಬೆಳಗಾವಿಯ ನೀರಾವರಿ ನಿಗಮದ ಆವರಣದಲ್ಲೇ ಜಾನುವಾರುಗಳನ್ನು ಕಟ್ಟಿ ರೈತರು ಪ್ರತಿಭಟಿಸಿದರು.  
ರಾಜ್ಯ

ಜಾನುವಾರುಗಳೊಂದಿಗೆ ರೈತರ ಪ್ರತಿಭಟನೆ

ಬೆಳಗಾವಿ: ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನೀಡಿದ ಭೂಮಿಗೆ ನ್ಯಾಯಯುತ ಪರಿಹಾರ ಹಾಗೂ ಸೂಕ್ತ ಪುನರ್ವಸತಿಗೆ ಆಗ್ರಹಿಸಿ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಬುಧವಾರ ಜಾನುವಾರು ಮೆರವಣಿಗೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.
ಮಂಗಳವಾರದಿಂದ ನೀರಾವರಿ ನಿಗಮದ ಆವರಣದಲ್ಲೇ ವಾಸ್ತವ್ಯ ಹೂಡಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಮಾಸ್ತ್ತಿಹೊಳಿ, ಗುಡಗನಟ್ಟಿ, ಬೀರನಹೊಳಿ, ಸುತಗಟ್ಟಿ ಹಾಗೂ ಜಾರಕಿಹೊಳಿ ಗ್ರಾಮಗಳ 500ಕ್ಕೂ ಹೆಚ್ಚು ರೈತರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕ್ಲಬ್ ರಸ್ತೆಯ ನೀರಾವರಿ ನಿಗಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜೋಡೆತ್ತು ಹಾಗೂ ಇತರ ಜಾನುವಾರು, ಚಕ್ಕಡಿ, ಮೇವಿನ ಸಮೇತ ಆಗಮಿಸಿದ್ದರು. ಚನ್ನಮ್ಮ ವೃತ್ತದಲ್ಲಿ ಕೆಲಹೊತ್ತು ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಕ್ಕೆ ರೈತ ಕುಟುಂಬ ಸದಸ್ಯರು ಸಾಥ್ ನೀಡಿದರು. ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು: ಕೆಲಹೊತ್ತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಪ್ರಮುಖರು ಮಾತನಾಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ಆಗಮಿಸಿದಾಗ, ಎಷ್ಟೇ ತಡವಾದರೂ ನಾವು ಕಾಯುತ್ತೇವೆ. ಜಿಲ್ಲಾಧಿಕಾರಿಯೇ ಮನವಿ ಸ್ವೀಕರಿಸಲು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಅನ್ಯ ಕಾರ್ಯದಲ್ಲಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕೆಲ ಸಮಯದ ಬಳಿಕ ಆಗಮಿಸಿ ರೈತರ ಮನವಿ ಸ್ವೀಕರಿಸಿದರು.
ಬಾಳೇಶ ಮಾವನೂರೆ, ಸಂತೋಷ ಪಾಟೀಲ, ಮಲಗೌಡ ಪಾಟೀಲ, ಬಾಳೇಶ ಪಾಟೀಲ, ಉದಯ ಹಿರೇಮಠ, ಸಿದ್ಧಲಿಂಗ ಬೆನ್ನಾಡಿ, ರಾಜು ಹುದ್ದಾರ, ಬರಮಾ ಮುಂಗಾರಿ, ಬಾಳೇಶ ಪಾಶ್ಚಾಪುರೆ, ಪತ್ರೆಪ್ಪ ಮಾಲಾದಾನಿ, ಸುನೀಲ ಕೋಳಿ, ದುಂಡಪ್ಪ ಪಾಟೀಲ ಬಾಳೇಶ ಹಲಕರ್ಣಿ, ಬಾಳೇಶ ಬಂಬರಗಿ, ಅಪ್ಪಯ್ಯ ಗುತ್ತಿ, ನಿಂಗಣ್ಣಗೌಡ ಪಾಟೀಲ ಇತರರಿದ್ದರು.