ಈರುಳ್ಳಿ, ತೊಗರಿ ಬೆಳೆಗೆ ಆವರಿಸಿರುವ ಕಸ್ಕೊಟಾ ಕಳೆಯೊಂದಿಗೆ ರೈತರು ಚಿಂಚೋಳಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಗೋಪಾಲ ಎಂ.ಪಿ., ಕೆ.ಎಂ.ಬಾರಿ, ಯಲ್ಲಾಲಿಂಗ ದಂಡಿನ್, ವೀರೇಶ ಯಂಪಳ್ಳಿ, ಹಣಮಂತ ಪೂಜಾರಿ, ಶಿವಕುಮಾರ ಅಂಬಲಗಿ ಖಲೀಲ್ ಪಟೇಲ್ ಇತರರಿದ್ದರು.
ಚಿಂಚೋಳಿ: ಈರುಳ್ಳಿ ಮತ್ತು ತೊಗರಿ ಬೆಳೆಗೆ ಆವರಿಸಿರುವ ಕಸ್ಕೊಟಾ ಕಳೆಯೊಂದಿಗೆ ರೈತರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಚೌಕ್ವರೆಗೆ ಮಂಗಳವಾರ ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಮುಖಂಡ ಗೋಪಾಲ ಎಂ.ಪಿ. ಗಾರಂಪಳ್ಳಿ ಮಾತನಾಡಿ, ತೊಗರಿ ನಾಡು ಹೆಗ್ಗಳಿಕೆಯ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಕಸ್ಕೊಟಾ ಕಳೆ ತೊಗರಿ, ಉದ್ದು, ಹೆಸರು, ಈರುಳ್ಳಿ, ವೀಳ್ಯದೆಲೆ ಸೇರಿ ನಾನಾ ಬೆಳೆಗಳಿಗೆ ಆವರಿಸಿ ಹಾನಿ ಮಾಡುತ್ತಿದ್ದು, ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಸರ್ಕಾರ ವಿಾನಿಗಳ ವರದಿ ಆಧರಿಸಿ ಕರಪತ್ರ, ಧ್ವನಿಸುರಳಿ ಬಿಡುಗಡೆ ಮಾಡಿ ಮಾರಕ ಕಳೆಯಾಗಿದೆ ಎಂದು ಜಾಗೃತಿ ಮೂಡಿಸುತ್ತಿದೆ ಹೊರತು, ನಷ್ಟ ಪರಿಹಾರ, ಔಷಧಿ ಕುರಿತು ಕೃಷಿ ಮಂತ್ರಿ ಚಕಾರವೆತ್ತಿಲ್ಲ. ಅನ್ನದಾತರ ಬದುಕಿಗೆ ಆಸರೆಯಾಗಬೇಕಿದ್ದ ಸರ್ಕಾರ ರೈತವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಕೆ.ಎಂ. ಬಾರಿ, ಯಲ್ಲಾಲಿಂಗ ದಂಡಿನ್, ವೀರೇಶ ಯಂಪಳ್ಳಿ, ಹಣಮಂತ ಪೂಜಾರಿ, ಶಿವಕುಮಾರ ಅಂಬಲಗಿ ಇತರರು ಮಾತನಾಡಿ, ಕೂಡಲೇ ಕಸ್ಕೊಟಾ ನಿಯಂತ್ರಣ ಕ್ರಮಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ಎಕರೆಗೆ 25 ಸಾವಿರ ರೂ. ನಷ್ಟ ಪರಿಹಾರ ನೀಡಬೇಕು. ಕಸ್ಕೊಟಾ ನಿಯಂತ್ರಣಕ್ಕೆ ಸಂಶೋಧನೆ ನಡೆಸಿ ಔಷಧ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ರೇವಣಸಿದ್ದಪ್ಪ ಪೂಜಾರಿ, ಶ್ರೀಮಂತ ಕಟ್ಟಿಮನಿ, ಹಣಮಂತ ಕೆ.ಪೂಜಾರಿ, ಖಲೀಲ್ ಪಟೇಲ್, ಸುಭಾಷ ಕೊಂಡಾ, ರಾಜು ಯಂಪಳ್ಳಿ, ಚಂದ್ರಶೆಟ್ಟಿ ಮರಪಳ್ಳಿ, ಹಣಮಂತ ಭೋವಿ, ಮೌನೇಶ ಮುಸ್ತಾರಿ, ಉಸ್ಮಾನ್ ಅಲಿ, ಪ್ರಭು ಭೋವಿ, ವೆಂಕಟರೆಡ್ಡಿ, ವೀರಶೆಟ್ಟಿ ಮಗಿ, ಅಮೃತ ಮಡಿವಾಳ, ರುಕ್ಮೀಣಿ ಇತರರಿದ್ದರು. ಸಿಎಂಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.