ಗಂಟು ರೋಗದಿಂದ ಎತ್ತು ಮೃತಪಟ್ಟಿರುವುದಕ್ಕೆ ಪಶು ಇಲಾಖೆಯ ನಿರ್ಲಕ್ಷೃವೇ ಕಾರಣ ಎಂದು ರೈತರು ಆರೋಪಿಸಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಸತ್ತ ಎತ್ತಿನೊಂದಿಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ
ಕೆ.ಆರ್.ಪೇಟೆ: ಗಂಟು ರೋಗದಿಂದ ಜಾನುವಾರುಗಳು ಮೃತಪಡುತ್ತಿದ್ದು ಸೂಕ್ತ ಕ್ರಮವಹಿಸಬೇಕೆಂದು ಆಗ್ರಹಿಸಿ ಪಟ್ಟಣದ ಪಶು ಆಸ್ಪತ್ರೆಯ ಮುಂಭಾಗದಲ್ಲಿ ಸತ್ತ ಎತ್ತಿನೊಂದಿಗೆ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಅಗ್ರಹಾರ ಬಡಾವಣೆಯ ಸುಬಾಷ್ ಎಂಬುವವರು ಇತ್ತೀಚೆಗೆ 2.5 ಲಕ್ಷ ರೂ. ನೀಡಿ ಖರೀದಿಸಿದ್ದ ಜೋಡಿ ಎತ್ತುಗಳಲ್ಲಿ 1 ಗಂಟು ರೋಗದಿಂದ ಮೃತಪಟ್ಟಿತ್ತು. ರಾಸುಗಳಿಗೆ ರೋಗ ಹರಡಿರುವ ಬಗ್ಗೆ ಮಾಹಿತಿ ನೀಡಿದರೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದ್ದರಿಂದ ಸಾವು ಸಂಭವಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೋಗ ನಿರೋಧಕ ಲಸಿಕೆಗಳನ್ನು ಗ್ರಾಮೀಣ ಭಾಗದಲ್ಲಿ ಮಾತ್ರ ಹಾಕುತ್ತಿದ್ದು ಪಟ್ಟಣದಲ್ಲಿ ಇರುವ ಜಾನುವಾರುಗಳ ಬಗ್ಗೆ ಪಶುಇಲಾಖೆಯ ಅಧಿಕಾರಿಗಳು ಗಮನ ಹರಿಸದ ಕಾರಣದಿಂದಲೇ ಜಾನುವಾರುಗಳು ಸಾಯುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜ್ ಮಾತನಾಡಿ, ಇಲಾಖೆಯಲ್ಲಿ ಶೇ.60ರಷ್ಟು ಹುದ್ದೆಗಳು ಖಾಲಿ ಇದ್ದು, ನಾವು ಈಗ ಇರುವ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದೇವೆ. ಒಂದೆರಡು ದಿನಗಳಲ್ಲಿ ಪಟ್ಟಣದಲ್ಲಿಯೂ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದೇವೆ. ಈಗ ಮೃತಪಟ್ಟಿರುವ ಹಸುವಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಕೆ.ಪುರುಷೋತ್ತಮ್, ಕೆ.ಕೆ.ಚಂದ್ರಶೇಖರ್, ಪರಮೇಶ್, ಸುರೇಶ್, ಮಂಜುನಾಥ್, ಶಿವು, ಬಸವರಾಜ್, ಪರಮೇಶ್, ಶ್ರೀನಿವಾಸ್, ಪ್ರತಾಪ್, ಪುನೀತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.