ಭೂಮಿ ಮರಳಿಸುವಂತೆ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೊನ್ನಕಿರಣಗಿ,ಸೋಮನಾಥಹಳ್ಳಿ,ಫಿರೋಜಾಬಾದ ಗ್ರಾಮಗಳ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
- ಸ್ವಾಧಿನಪಡಿಸಿಕೊಂಡು ದಶಕವಾದರೂ ಶುರುವಾಗದ ಸಿಮೆಂಟ್ ಫ್ಯಾಕ್ಟರಿ
- ಹೊನ್ನಕಿರಣಗಿ ಸೋಮನಾಥ ಹಳ್ಳಿ ಫಿರೋಜಾಬಾದ ಸಂತ್ರಸ್ತರ ಆಗ್ರಹ
ಕಲಬುರಗಿ: ಸಿಮೆಂಟ್ ಫ್ಯಾಕ್ಟರಿ ಆರಂಭಿಸಲು 2013ರಲ್ಲಿ ಜಮೀನು ಸ್ವಾಧಿನಪಡಿಸಿಕೊಂಡಿದ್ದರೂ ಇದುವರೆಗೂ ಉದ್ದೇಶಿತ ಯೋಜನೆ ಆರಂಭಗೊಳ್ಳದ ಹಿನ್ನೆಲೆಯಲ್ಲಿ ತಮ್ಮ ಜಮೀನು ಮರಳಿ ತಮಗೆ ನೀಡುವಂತೆ ಆಗ್ರಹಿಸಿ ಹೊನ್ನಕಿರಣಗಿ ,ಸೋಮನಾಥ ಹಳ್ಳಿ, ಫಿರೋಜಾಬಾದ ಭೂ ಸಂತ್ರಸ್ಥರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಲಬುರಗಿ ತಾಲೂಕಿನ ಹೊನ್ನಕಿರಣಗಿ ,ಸೋಮನಾಥ ಹಳ್ಳಿ, ಫಿರೋಜಾಬಾದ ಸೀಮಾಂತರದಲ್ಲಿ ಗುಲ್ಬರ್ಗ ಸಿಮೆಂಟ್ ಕಂಪನಿ ಹೈಡಲ್ ರ್ಬಗ್ ಗ್ರೂಪ್ನವರು ಫ್ಯಾಕ್ಟರಿ ಆರಂಭಿಸಲು 2013ರಲ್ಲಿ ರೈತರ 1,821 ಎಕರೆ ಜಮೀನು ಸ್ವಾಧಿನಪಡಿಸಿಕೊಂಡಿದ್ದು, ಇದುವರೆಗೂ ಯಾವುದೇ ಕೆಲಸ ಆರಂಭಗೊಂಡಿಲ್ಲ. ಅಲ್ಲದೆ ಪೂರ್ಣ ಪರಿಹಾರವನ್ನು ನೀಡಿಲ್ಲ. ಹೀಗಾಗಿ ತಮ್ಮ ಜಮೀನು ಮರಳಿಸಬೇಕು ಎಂದು ಒತ್ತಾಯಿಸಿ ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಮೀನು ವಶಪಡಿಸಿಕೊಂಡ ಬಳಿಕ ಕೃಷಿಕ ಕುಟುಂಬದವರಾದ ಎಲ್ಲರು ಕೃಷಿ ಕೆಲಸ ವಂಚಿತರಾಗಿ ಕುಟುಂಬ ನಿರ್ವಹಣೆಗೆ ಸಮಸ್ಯೆ ಎದುರಿಸುವಂತಾಗಿದೆ. ಹೊಲ ಕಳೆದುಕೊಂಡಿದ್ದರಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗುತ್ತಿಲ್ಲ. ಬದುಕು ಬೀದಿಗೆ ಬಿದ್ದಿದೆ. ಕಂಪನಿ ಆರಂಭವಾಗುವ ಲಕ್ಷಣಗಳಿಲ್ಲ. ಹೀಗಾಗಿ ಜಮೀನು ಮರಳಿಸಬೇಕು ಎಂದು ರೈತರು ಆಗ್ರಹಿಸಿದರು.
ಕೂಡಲೇ ಸರ್ಕಾರ ಸ್ಪಂದಿಸಬೇಕು ಒತ್ತಾಯಿಸಿದರು.ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಹೋದರೆ ಹೋರಾಟ ತೀವ್ರಗೊಳಿಸಲಾಗುವುದು ಪ್ರತಿಭಟನಾಕಾರರು ಎಂದು ಎಚ್ಚರಿಸಿದರು. ಭೂ ಸಂತ್ರಸ್ಥರ ಹೋರಾಟ ಸಮಿತಿ ಆಧ್ಯಕ್ಷ ಜೆಟ್ಟೆಪ್ಪ ಪೂಜಾರಿ, ಕಾರ್ಯಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಪ್ರಮುಖರಾದ ಶಂಕರ ಗೊಬ್ಬೂರ,ಶಿವಪ್ಪ ಜಲ್ಲಿ , ಈರಣ್ಣ ಉಳ್ಳಾಗಡ್ಡಿ, ಪ್ರಭು ಭೈರಾಮಡಗಿ, ಬಸವರಾಜ ಕೊಬಾಳ, ಭಗವಂತರಾಯ ದಂಡಗುಂಡ, ಉಮೇಶಗೌಡ, ಹಣಮಂತ ಅರಿಶಿಣ,ಮಲ್ಲು ನರಿಬೋಳ,ನಾಗಪ್ಪ ಪೂಜಾರಿ,ಬಸವರಾಜ ಗೆಬ್ಬೂರ, ಪರಮೇಶ ನರಿಬೊಳ ಸೇರಿದಂತೆ ರೈತರು ಪಾಲ್ಗೊಂಡಿದ್ದರು.
"
ಉದ್ದೇಶಿತ ಕಾರ್ಯಕ್ಕಾಗಿ ಕೃಷಿಕರ ಜಮೀನು ಸ್ವಾಧಿನಪಡಿಸಿಕೊಂಡ ಬಳಿಕ, ನಿಗಧಿತ ಸಮಯದೊಳಗೆ ಕಂಪನಿ ಆರಂಭಗೊಳ್ಳದಿದ್ದರೆ, ಆ ಭೂಮಿಯನ್ನು ಮರಳಿ ರೈತರಿಗೆ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿವೆ. ಹೀಗಾಗಿ ಅದರಂತೆ ರೈತರಿಗೆ ಮರಳಿಹಸ್ತಾಂತರಿಸಬೇಕು.
— > ಶರಣಬಸಪ್ಪ ಮಮಶೆಟ್ಟಿ ರೈತ ಮುಖಂಡ