ಹುಣಸೂರು ತಾಲೂಕು ಗೆರಸನಹಳ್ಳಿಯಲ್ಲಿ ಸರ್ವೀಸ್ ರಸ್ತೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ರಮೇಶ್, ಶಿವಶಂಕರ್, ವಿಶಾಲಾಕ್ಷಮ್ಮ, ಪುಟ್ಟಮ್ಮ, ಕೆ.ಬಿ.ದೇವರಾಜ್ ಇತರರಿದ್ದಾರೆ.
ಹುಣಸೂರು: ಶ್ರೀರಂಗಪಟ್ಟಣ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಸರ್ವೀಸ್ ರಸ್ತೆ ಅಳವಡಿಸಲು ಆಗ್ರಹಿಸಿ ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಜ.30ರ ವಿಜಯವಾಣಿ ಸಂಚಿಕೆಯಲ್ಲಿ ‘ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ಗಿಲ್ಲ ಸರ್ವೀಸ್ ರಸ್ತೆ’ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿ ರೈತರ ಮೆಚ್ಚುಗೆಗೆ ಪಾತ್ರವಾಯಿತು. ಪರಿಣಾಮ ಶುಕ್ರವಾರ ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ ಗೆರಸನಹಳ್ಳಿ, ಕೊಮ್ಮೇಗೌಡನಕೊಪ್ಪಲು, ಒಡ್ಡರಹಳ್ಳಿ, ಹಳೇಬೀಡು ಗ್ರಾಮಗಳ ರೈತರು ಗೆರಸನಹಳ್ಳಿ ಬಳಿ ಹಾದುಹೋಗಿರುವ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡ ರಮೇಶ್, ರಾಷ್ಟ್ರೀಯ ಹೆದ್ದಾರಿ ಮಾಡುವ ಮೂಲಕ ರೈತರು ತಮ್ಮ ಜಮೀನುಗಳಿಗೆ ತೆರೆಳಲು ಆಗದಂತಾಗಿದೆ. ನಮ್ಮ ಗೆರಸನಹಳ್ಳಿ ರೈತರು ತಮ್ಮ ಜಮೀನಿಗೆ ತೆರಳಲು ಕನಿಷ್ಠ 4-5 ಕಿ.ಮೀ. ಸುತ್ತಿಬಳಸಿ ಬರುವಂತಾಗಿದೆ. ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆ ನಿರ್ಮಿಸಿ ನಂತರ ಹೆದ್ದಾರಿಕಾಮಗಾರಿ ನಡೆಸಲಿ ಎಂದು ಆಗ್ರಹಿಸಿದರು. ಮುಖಂಡರಾದ ಶಿವಶಂಕರ್, ಮಾದೇಗೌಡ, ಸಣ್ಣಯ್ಯ, ರಾಜೇಗೌಡ, ಕೆ.ಬಿ.ದೇವರಾಜ್, ಬಸವರಾಜು, ವಿಶಾಲಾಕ್ಷಮ್ಮ, ಪುಷ್ಪಾ, ಸಾಕಮ್ಮ, ಕಾಳಮ್ಮ, ಪುಟ್ಟಮ್ಮ, ಜಯಮ್ಮ ಮುಂತಾದವರು ಇದ್ದರು.
ಕಲ್ಲಹಳ್ಳಿಯಲ್ಲೂ ಆಕ್ರೋಶ: ಕಲ್ಲಹಳ್ಳಿ ಗ್ರಾಮದಲ್ಲೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತಸಂಘದ ಉಪಾಧ್ಯಕ್ಷ ಕಲ್ಲಹಳ್ಳಿ ವಿಷಕಂಠಪ್ಪ, ರೈತರ ಬದುಕಿನ ಸರ್ವನಾಶಕ್ಕೆ ಹೆದ್ದಾರಿ ಮಾಡುತ್ತಿದ್ದಾರೆ. ಸರ್ವೀಸ್ ರಸ್ತೆ ಮಾಡದೇ ಹೆದ್ದಾರಿ ಮಾಡುತ್ತಾರೆ ಎಂದರೆ ರೈತರು ಬದುಕಬಾರದೆಂದೇ ಅರ್ಥ. ರೈತರು ಇನ್ನು ಸುಮ್ಮನಿರುವುದಿಲ್ಲ. ಸರ್ವೀಸ್ ರಸ್ತೆ ಮಾಡಲು ಹೆದ್ದಾರಿ ಪ್ರಾಧಿಕಾರ ಕೂಡಲೇ ಕ್ರಮವಹಿಸಬೇಕು. ಇಲ್ಲದಿದ್ದರೆ ತಾಲೂಕಿನ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿ ನಡೆಯದಂತೆ ತಡೆಯೊಡ್ಡಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತಮುಖಂಡರಾದ ರಘು, ನಂಜುಂಡಸ್ವಾಮಿ, ಷಣ್ಮುಖ, ಚಂದ್ರ, ಈರತಪ್ಪ, ರವಿ, ಹರಿ, ಚಂದ್ರಶೇಖರ್, ನಿಂಗರಾಜ್, ಬಸವರಾಜಪ್ಪ, ಕೆ.ಟಿ.ರಾಜು ಅಶೋಕ ಇತರರಿದ್ದರು.
ವಿಜಯವಾಣಿ ವರದಿಗೆ ಮೆಚ್ಚುಗೆ: ವಿಜಯವಾಣಿ ವರದಿಗೆ ಮೆಚ್ಚುಗೆ ಸೂಚಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ವಿಜಯವಾಣಿಯ ಸಾಮಾಜಿಕ ಕಾಳಜಿಗೆ ಧನ್ಯವಾದಗಳನ್ನು ತಿಳಿಸಿದರು. ಹೆದ್ದಾರಿ ಪ್ರಾಧಿಕಾರ ಮತ್ತು ಸಂಸದರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈಗಲೇ ಎಚ್ಚೆತ್ತುಕೊಂಡು ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲಿ ತೀವ್ರ ಹೋರಾಟ ನಡೆಸಲಿದ್ದು, ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ರಸ್ತೆಯಲ್ಲೇ ನಿರಂತರ ಪ್ರತಿಭಟನೆ ನಡಸಲಾಗುವುದೆಂದು ಎಚ್ಚರಿಸಿದರು.