ಪ್ರತಿಭಟನಾನಿರತ ರೈತರ  
ರಾಜ್ಯ

ಭೂಸ್ವಾಧಿನ ವಿರೋಧಿಸಿ ರೈತರ ಪ್ರತಿಭಟನೆ / SARJAPUR

ಸರ್ಜಾಪುರ : ಭೂಸ್ವಾಧಿನ ವಿರೋಧಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಬೆಂಗಳೂರಿಗೆ ಹೊರಟಿದ್ದ ಸರ್ಜಾಪುರ ಹೋಬಳಿಯ 11 ಹಳ್ಳಿಗಳ 600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂದೋಬಸ್ತ್​ ನೀಡುವುದಾಗಿ ಹೇಳಿ ಕೋರಮಂಗಲ ಕವಾಯತು ಮೈದಾನಕ್ಕೆ ಕರೆದುಕೊಂಡು ಹೋಗಿದಕ್ಕೆ ಆಕ್ರೋಶಗೊಂಡ ರೈತರು ಬೊಮ್ಮಸಂದ್ರ ಚೆಕ್​ಪೋಸ್ಟ್​ ಬಳಿ ರಸ್ತೆ ಬಂದ್​ ಮಾಡಿ ಆಕ್ರೋಶ ಹೊರಹಾಕಿದರು.
ಈ ವೇಳೆ ಪೊಲೀಸರು ಹಾಗೂ ರೈತರ ಮಧ್ಯೆ ವಾಗ್ವಾದ ನಡೆದಿದ್ದು, ತಳ್ಳಾಟ, ನೂಕಾಟದಲ್ಲಿ ಕೆಲವರು ಗಾಯಗೊಂಡಿದ್ದಾರೆ. ಚಳವಳಿ ಅಧ್ಯ ಕೆ.ಸಿ.ದೇವರಾಜ್​ಗೆ ಹೃದಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನಾನಿರತ ರೈತರ ಮನವೊಲಿಕೆಗೆ ಮುಂದಾದ ಎಸಿಪಿ ನಾರಾಯಣ್​, ಕಾನೂನು ಕಾಪಾಡುವ ಮತ್ತು ನಿಮಗೆ ರಣೆ ಕೊಡುವ ದೃಷ್ಟಿಯಿಂದಲೇ ನಿಮ್ಮನ್ನು ಇಲ್ಲಿಗೆ ಕರೆತರಲಾಗಿದೆ. ಇದೇ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ನಿಮ್ಮ ಮನವಿ, ಅಹವಾಲುಗಳನ್ನು ಅವರಿಗೆ ಕೊಡಿಸುತ್ತೇವೆ. ಅಲ್ಲದೇ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೂ ನಿಮ್ಮ ಮನವಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಹೋರಾಟಗಾರ ಡಾ.ಚಿನ್ನಪ್ಪ ವೈ. ಚಿಕ್ಕಹಾಗಡೆ ಮಾತನಾಡಿ, ಆನೇಕಲ್​ ತಾಲೂಕಿನಲ್ಲಿ 5 ಕೈಗಾರಿಕಾ ಪ್ರದೇಶಗಳು ಹಾಗೂ ನಾಲ್ಕು ವಸತಿ ಬಡಾವಣೆಗಳಿಗೆ ರೈತರ ಸಾವಿರಾರು ಎಕರೆ ಜಮೀನನ್ನು ಸ್ವಾಧಿನ ಪಡಿಸಿಕೊಳ್ಳಲಾಗಿದೆ. ಸರ್ಜಾಪುರ ಭಾಗದಲ್ಲಿ ಫಲವತ್ತಾದ 2,365 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧಿನ ಪಡಿಸಿಕೊಳ್ಳುವುದನ್ನಾದರೂ ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಶೇ.80 ಜನರಿಗೆ ಆನೇಕಲ್​ ತಾಲೂಕಿನ ರೈತರು ತರಕಾರಿ, ಸೊಪ್ಪು, ಹಾಲು ಪೂರೈಸುತ್ತಾರೆ. ಮಹಾನಗರದ ಜನ ದಿನ ಬೆಳಗಾದರೆ ನಮ್ಮನ್ನೇ ಅವಲಂಬಿಸಿದ್ದಾರೆ. ಈಗ ಫಲವತ್ತಾದ ಕೃಷಿ ಭೂಮಿಯನ್ನು ಬರಡು ಭೂಮಿ ಎಂದು ಸುಳ್ಳು ಮಾಹಿತಿ ನೀಡಿ, ಜಮೀನನ್ನು ಕಬಳಿಸಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಡಿಸಿಪಿ ಸುಜಿತಾ ಮಾತನಾಡಿ, ರೈತರ ಅಹವಾಲನ್ನು ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.
ರೈತ ಹೋರಾಟಗಾರರಾದ ಕೇಶವ ರೆಡ್ಡಿ, ಪರಶುರಾಮ್​, ಉಮಾ ಹರೀಶ್​, ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ ಸುರೇಶ್​, ಅಶೋಕ್​, ರಾಮಚಂದ್ರರೆಡ್ಡಿ, ಮಧು ,ರಾಜೇಶ್​ ಹಾಗೂ 11 ಗ್ರಾಮಗಳ ರೈತರು ಮತ್ತು ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.