ಬೆಳೆ ವಿಮೆ 2ನೇ ಕಂತಿನ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಚಿಂಚೋಳಿ ತಾಲೂಕಿನ ಸುಲೇಪೇಟದ ಬಸವೇಶ್ವರ ವೃತ್ತದಲ್ಲಿ ಗ್ರಾಮಸ್ಥರು, ರೈತರು ಶುಕ್ರವಾರ ಬೃಹತ್ ರಸ್ತಾ ರೋಕೋ ನಡೆಸಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಮಲ್ಲಿಕಾರ್ಜುನ ದೇಸಾಯಿ, ರುದ್ರಮುನಿ ರಾಮತೀರ್ಥಕರ, ಮುರುಗೆಪ್ಪ ಕುಕಡಿ, ಶರಣಪ್ಪ ದೇಸಾಯಿ, ರಮೇಶ ದೇಸಾಯಿ, ಮಲ್ಲಿಕಾರ್ಜುನ ಕೊಡದೂರ, ಶರಣಬಸಪ್ಪ ಮಮಶೆಟ್ಟಿ ಇತರರಿದ್ದರು.
- ಸುಲೇಪೇಟದಲ್ಲಿ ಬೃಹತ್ ರಸ್ತಾ ರೋಕೋ ಚಳವಳಿ
- ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ
ಚಿಂಚೋಳಿ: ತಾಲೂಕಿನ 12 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಬೆಳೆ ವಿಮೆ 2ನೇ ಕಂತಿನ ಪರಿಹಾರ ವಿತರಣೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಸುಲೇಪೇಟದ ಬಸವೇಶ್ವರ ವೃತ್ತದ ಬಳಿಯ ಕಲಬುರಗಿ& ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ರೈತರು, ಗ್ರಾಮಸ್ಥರು ಶುಕ್ರವಾರ ಬೃಹತ್ ರಸ್ತಾ ರೋಕೋ ಹೋರಾಟ ನಡೆಸಿದರು.
ಬೆಳಗ್ಗೆ 10ಕ್ಕೆ ನೂರಾರು ರೈತರು ಮುಖ್ಯ ರಸ್ತೆಯಲ್ಲಿ ಸಂಚಾರ ತಡೆದು ಹೋರಾಟಕ್ಕೆ ಕುಳಿತರು. ಜಿಲ್ಲೆಯಲ್ಲಿ ಕ್ಷೇತ್ರ ಅತಿ ಕಮ್ಮಿ ಬೆಳೆ ವಿಮೆ ಹಣ ಬಿಡುಗಡೆ ಆಗಿದೆ. ಈ ಮೂಲಕ ರೈತರಿಗೆ ಅನ್ಯಾಯ ಮಾಡಲಾಗಿದೆ. ಯಾವ ಮಾನದಂಡದೊಂದಿಗೆ ಪರಿಹಾರ ವಿತರಿಸಲಾಗುತ್ತಿದೆ ಎಂಬುದು ತಿಳಿದಿಲ್ಲ. ಕೃಷಿ, ಕಂದಾಯ ಅಧಿಕಾರಿಗಳು ಈ ಭಾಗದ ರೈತರಿಗೆ ಬಹುದೊಡ್ಡ ಅನ್ಯಾಯ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಮ್ಮಇದಲಾಯಿ, ಚಿಮ್ಮನಚೋಡ, ಗರಗಪಳ್ಳಿ, ಹಸರಗುಂಡಗಿ, ಹೋಡೆಬೀರನಳ್ಳಿ, ಜಟ್ಟೂರ, ರ್ಖಚಖೇಡ, ಕೇರಳ್ಳಿ, ಕುಪನೂರ, ನಾಗಇದಲಾಯಿ, ನಿಡಗುಂದಾ, ಶಿರೋಳ್ಳಿ, ಗಡಿಕೇಶ್ವಾರ, ಕುಂಚಾವರಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಅನ್ಯಾಯವಾಗಿದೆ. ಬೆವರು ಹರಿಸಿ ಬೆಳೆದ ಬೆಳೆಯೂ ಹಾಳಾಗಿದ್ದು, ನಾವೆಲ್ಲ ವಿಮೆ ತುಂಬಿದ್ದು, ನಮ್ಮ ಹಕ್ಕಿನ ಹಣ ಕೇಳುತ್ತಿದ್ದೇವೆ. ನಮ್ಮ ಹಕ್ಕಿನ ವಿಮೆ ಹಣ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಕಿಡಿಕಾರಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹೋರಾಟ ಸ್ಥಳಕ್ಕೆ ಆಗಮಿಸಿ ರೈತರ ನೋವು ಆಲಿಸಿ, 12 ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ವಿತರಣೆಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ತಣ ಪರಿಶೀಲನೆ ನಡೆಸಲಾಗುವುದು. ಎರಡು ಕಂತು ಸೇರಿ ಕ್ಷೇತ್ರಕ್ಕೆ 35 ಕೋಟಿ ರೂ. ವಿಮೆ ಪರಿಹಾರ ಬಿಡುಗಡೆ ಆಗಿದೆ. ವಿಮೆ ಕಂಪನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಹಕ್ಕಿನಿಂದ ವಂಚಿತರಾದ ಅರ್ಹ ರೈತನಿಗೆ 2ನೇ ಕಂತಿನ ವಿಮೆ ಹಣ ವಿತರಣೆ ಮಾಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಇದೀಗ ಹೆಸರು, ಉದ್ದು ಹಾನಿ ಕುರಿತು ವಿಮೆ ಕಂಪನಿಯೊಂದಿಗೆ ಚರ್ಚಿಸಿದ್ದು, ಶೇ.75 ಹಾನಿ ವರದಿ ಸಲ್ಲಿಸಲಾಗಿದೆ. ಶ್ರೀವೇ ಸರ್ವೇ ಕಾರ್ಯ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಅಧಿಕಾರಿಗಳ ಭರವಸೆ ಮೇರೆಗೆ ಸಂಜೆ ಹೋರಾಟ ಮೊಟಕುಗೊಳಿಸಿದರು. ಭರವಸೆಯಂತೆ ನಿಗದಿತ ಅವಧಿಯಲ್ಲಿ ವಿಮೆ ಹಣ ಜಮೆ ಆಗದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಮುಖರಾದ ಮಲ್ಲಿಕಾರ್ಜುನ ದೇಸಾಯಿ, ರುದ್ರಮುನಿ ರಾಮತೀರ್ಥಕರ, ಮುರುಗೆಪ್ಪ ಕುಕಡಿ, ಶರಣಪ್ಪ ದೇಸಾಯಿ, ರಮೇಶ ದೇಸಾಯಿ, ಮಲ್ಲಿಕಾರ್ಜುನ ಕೊಡದೂರ, ಶರಣಬಸಪ್ಪ ಮಮಶೆಟ್ಟಿ, ರುದ್ರಶೆಟ್ಟಿ ಪಡಶೆಟ್ಟಿ, ಅಂಬರೀಷ ಗೋಣಿ, ಚೇತನ ಅಣವಾರ, ಮೋಹನ ಐನಾಪುರ, ಶರಣಬಸಪ್ಪ ಸೊಂತ, ವೀರೇಶ ರೆಮ್ಮಣ್ಣಿ, ಶಿವಪುತ್ರಪ್ಪ ಬಿಜನಳ್ಳಿ, ವೈಜನಾಥ ದಾದಿ, ಜಹೀರ್ ಪಟೇಲ್, ಅಣವೀರ ಗೌನಳ್ಳಿ, ಶಿವಶರಣಪ್ಪ ನಿಡಗುಂದಾ, ಮಲ್ಲಣ್ಣ ಶೆಳ್ಳಗಿ, ಬಸಯ್ಯ ಗುಡಿ, ನಾಗೇಶ ಕೊಟಗಿ, ರಾಜಶೇಖರ ದಬ್ಬಾ, ಅಹಮದ್ ಮೋಮಿನ್, ಸಿದ್ದಯ್ಯ ಸ್ವಾಮಿ, ಶಿವರಾಮ ರಾಠೋಡ್, ರಜಾಕ್ ಪಟೇಲ್, ಶಿವಕುಮಾರ ರೆಮ್ಮಣ್ಣಿ, ಸಿದ್ದಪ್ಪ ಯಾಲಕ್ಕಿ, ಅಂಬರೀಷ ಕುಂಬಾರ, ಅಪ್ಪಣ್ಣ ತಳವಾರ, ನಾಗಯ್ಯ ಸ್ವಾಮಿ, ನಾಗೇಶ ಚಾಂಗಲೇರಾ, ಮಹಾಂತೇಶ ಸಾಲಿ, ರವಿರಾಜ ರಾಠೋಡ್, ಮಲ್ಲಿಕಾರ್ಜುನ ಗುಲಗುಂಜಿ, ನಾರಾಯಣರೆಡ್ಡಿ, ಶೇಕಪ್ಪ ಬಗಲಿ, ಅಂಬರೀಷ ಗಣಾಪುರ, ಶರಣು ಕೋರವಾರ ಇತರರಿದ್ದರು.
ಪಿಎಸ್ಐ ಅಮರ ಕುಲಕರ್ಣಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್
ರಸ್ತೇಲಿ ಊಟ, ವಾಹನ ಸಂಚಾರ ಸ್ಥಗಿತ
ಬೆಳಗ್ಗೆ 10ಕ್ಕೆ ಶುರುವಾದ ಹೋರಾಟ ಸಂಜೆ 4ಗಂಟೆವರೆಗೂ ನಡೆಯಿತು. ಇದರಿಂದಾಗಿ ರೈತರು ರಸ್ತೆಯಲ್ಲಿಯೇ ಸೌದೆ ಒಲೆ ಹಚ್ಚಿ ಅಡುಗೆ ಮಾಡಿಕೊಂಡು ಭೋಜನ ಸವಿದರು. ಕಲಬುರಗಿ& ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು 6 ತಾಸು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದರು. ತುರ್ತು ಸೇವೆ ಹೊರತು ಪಡಿಸಿ ಇನ್ನಿತರ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹೋರಾಟದ ಪರಿಣಾಮವಾಗಿ ರಸ್ತೆಯ ಎರಡು ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೋರಾಟ ಮುಗಿಯುತ್ತಿದ್ದಂತೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.