ತಾಲೂಕು ಬರಪೀಡಿತ ಘೋಷಿಸುವಂತೆ ಆಗ್ರಹಿ ಮಂಗಳವಾರ ರೈತ ಸಂಟನೆಗಳು ಕಾಳಗಿ ಬಂದ್ ನಡೆಸಿ ಎಸಿ ಸಾಹಿತ್ಯ ಆಲದಕಟ್ಟಿ ಅವರಿಗೆ ಮನವಿಪತ್ರ ಸಲ್ಲಿಸಿದವು. ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶ್ರೀ ಶಾಂತಸೋಮನಾಥ ಸ್ವಾಮೀಜಿ, ಮಾಜಿ ಸಂಸದ ಡಾ.ಉಮೇಶ ಜಾಧವ್, ಶಾಸಕ ಡಾ.ಅವಿನಾಶ ಜಾಧವ್, ಜಿಪಂ ಮಾಜಿ ಸದಸ್ಯ -ರಾಜೇಶ ಗುತ್ತೇದಾರ್ ಇತರರಿದ್ದರು.
- ಕಾಳಗಿ ಬಂದ್ಗೆ ವ್ಯಾಪಕ ಜನಬೆಂಬಲ
- ಕೃಷಿಕರ ನಿರಾಹಾರ ಧರಣಿ
- ಮಠಾಧೀಶರ ಸಾಥ್
ಕಾಳಗಿ: ಮಳೆ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿರುವ ಕೃಷಿಕರ ಗೋಳು ಆಲಿಸದ ಸರ್ಕಾರದ ವಿರುದ್ಧ ಸಿಡಿದೆದ್ದ ವಿವಿಧ ರೈತ ಸಂಘಟನೆಗಳು ಮಂಗಳವಾರ ಕರೆ ನೀಡಿದ ಕಾಳಗಿ ಬಂದ್ಗೆ ವ್ಯಾಪಕ ಜನಬೆಂಬಲ ವ್ಯಕ್ತವಾಯಿತು.
ಬಸವೇಶ್ವರ ವೃತ್ತದಿಂದ ಬಾಬಾಸಾಹೇಬ್ ಪುತ್ಥಳಿವರೆಗೆ ಮೆರವಣಿಗೆ ನಡೆಸಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅನ್ನ ನೀರಿಲ್ಲದೆ 55 ಗ್ರಾಮದ ಅನ್ನದಾತರು ಧರಣಿ ನಡೆಸಿದರು. ಇದಕ್ಕೆ ವಿವಿಧ ಮಠಾಧೀಶರು ಸಾಥ್ ನೀಡಿದರು.
ಶಾಸಕ ಡಾ.ಅವಿನಾಶ ಜಾಧವ್ ಮಾತನಾಡಿ, ಪ್ರಸಕ್ತ ವರ್ಷ ಒಣ ಬರ ಆವರಿಸಿದೆ. ರೈತರ ಗೋಳಾಟ ಆಲಿಸದ ರಾಜ್ಯ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ -ರಾಜೇಶ ಗುತ್ತೇದಾರ್ ಮಾತನಾಡಿ, ರೈತರ ಸಂಕಷ್ಟದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾಮಾಜಿಕ ನ್ಯಾಯ ಕಲ್ಪಿಸುವ ಜವಾಬ್ದಾರಿ ಸರ್ವಪಕ್ಷಗಳ ಮೇಲಿದೆ. ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರಿಗೆ ನಿಯೋಗ ಕೊಂಡೊಯ್ಯುವುದಾಗಿ ಹೇಳಿದರು.
ಭರತನೂರ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಮಂಗಲಗಿ&-ಟೆಂಗಳಿಯ ಶಾಂತಸೋಮನಾಥ ಶ್ರೀ, ಸುಗೂರಿನ ಚನ್ನರುದ್ರಮುನಿ ಶ್ರೀ, ಹೊಸ್ಸಳ್ಳಿಯ ಸಿದ್ದಲಿಂಗ ಶ್ರೀ, ಏಕನಾಥ ಮಹಾರಾಜ, ರಟಕಲ್ನ ನೀಲಕಂಠ ಸ್ವಾಮೀಜಿ, ರೇವಣಸಿದ್ಧ ಶರಣರು, ಕೋಡ್ಲಿಯ ಬಸವಲಿಂಗ ಶ್ರೀ, ಮಾಜಿ ಸಂಸದ ಡಾ.ಉಮೇಶ ಜಾಧವ್, ರಾಜ್ಯ ರೈತ ಸೇನೆ ಮತ್ತು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ್ ಗೋಣಗಿ, ಜಗದೀಶ ಮಾಲಿಪಾಟೀಲ್, ಶರಣಬಸಪ್ಪ ಮಮಶೆಟ್ಟಿ, ಸುಂದರ ಸಾಗರ, ಮೋಹನ ಚಿನ್ನ, ರಾಘವೇಂದ್ರ ಗುತ್ತೇದಾರ್, ಪ್ರಶಾಂತ ಕದಂ, ಮಲ್ಲಿಕಾರ್ಜುನ ಪಾಟೀಲ್ ರುದನೂರ, ಪ್ರಶಾಂತ ರಾಜಾಪುರ, ಕಾಳಪ್ಪ ಕರೆಮನೋರ, ಶೇಖರ ಮಾನಶೆಟ್ಟಿ, ಶಿವರುದ್ರಯ್ಯ ಸ್ವಾಮಿ ಸಾಲಿಮಠ, ರಮೇಶ ಕಿಟ್ಟದ, ಮಹಾದೇವಪ್ಪ ಗೋಣಿಕರ, ಶೇಖರ ಮಾಲಿಪಾಟೀಲ್ ಇತರರಿದ್ದರು.
ಸ್ಥಳಕ್ಕೆ ಆಗಮಿಸಿದ ಎಸಿ ಸಾಹಿತ್ಯ ಆಲದಕಟ್ಟಿ ನೇತೃತ್ವದ ತಂಡ ರೈತರ ಅಳಲು ಆಲಿಸಿ ಎರಡನೇ ಕಂತಿನ ವಿಮೆ ಹಣ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತು. ಶಹಾಬಾದ್ ಡಿವೈಎಸ್ಪಿ ಶಂಕರಗೌಡ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ವರ್ತಕರು ಸ್ವಯಂಪ್ರೇರಿತ ಅಂಗಡಿ-&ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಪ್ರಮುಖ ರಸ್ತೆ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಜನಸಂಚಾರ ವಿರಳವಾಗಿತ್ತು.
ರಾಜ್ಯ ಸರ್ಕಾರ ರೈತರ ತಾಳ್ಮೆ ಪರೀಕ್ಷಿಸದೆ ಎರಡನೆಯ ಕಂತಿನ ಬೆಳೆವಿಮೆ ಹಣ ಖಾತೆಗೆ ಜಮೆ ಮಾಡಬೇಕು. ರೈತರ ವಿಷಯದಲ್ಲಿ ರಾಜಕೀಯ ಸಲ್ಲ. ಕೃಷಿಕರಿಗಾದ ಅನ್ಯಾಯ ಸರಿಪಡಿಸಲು ಕೇಂದ್ರ ಮಂತ್ರಿ ಶಿವರಾಜಸಿಂಗ್ ಚೌಹಾಣ್ ಬಳಿ ರೈತರ ನಿಯೋಗ ಕೊಂಡೊಯ್ಯಲಾಗುವುದು.
— > -ಡಾ.ಉಮೇಶ ಜಾಧವ್ ಮಾಜಿ ಸಂಸದ