Farmers' groups march to AC office on 22nd
ತಿಪಟೂರು: ಖಾತೆದಾರರು ಮತ್ತು ಬಗರ್ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ಜೂ.22ರಂದು ರೈತಪರ ಸಂಘಟನೆಗಳ ವತಿಯಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಹಸಿರಸೇನೆ ತಾಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜ್, ಬಗರ್ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಇನ್ನಿಲ್ಲದ ದೌರ್ಜನ್ಯ ಎಸಗುತ್ತಿದೆ. ರೈತರನ್ನು ಒಕ್ಕಲೆಬ್ಬಿಸುವ ಕಾರ್ಯದಲ್ಲಿ ತೊಡಗಿದ್ದರೂ ಸ್ಥಳಿಯ ಶಾಸಕರು ಈವರೆಗೂ ರೈತರ ಪರವಾಗಿ ಧ್ವನಿ ಎತ್ತಿಲ್ಲ. ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನವೂ ಆಗಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜೂ.22ರಂದು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಈರಲಗೆರೆ ಗ್ರಾಮದಿಂದ ಸಹಸ್ರಾರು ರೈತರು ನಗರದ ಉಪವಿಭಾಗಾಧಿಕಾರಿ ಕಚೇರಿವರೆಗೂ ಕಾಲ್ನಡಿಗೆಯಲ್ಲಿ ತೆರಳಿ ಸಮಸ್ಯೆ ಬಗೆಹರಿಸಲು ಮನವಿ ನೀಡಲಾಗುವುದು ಎಂದು ತಿಳಿಸಿದರು.
ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್.ಚನ್ನಬಸವಣ್ಣ ಮಾತನಾಡಿ, 30&-40 ವರ್ಷಗಳಿಂದ ರೈತರು ಬಗರ್ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಶಾಸಕರು 7ರಿಂದ 8 ಸಾವಿರ ರೈತರಿಗೆ ಸಾಗುವಳಿ ಪತ್ರ ನೀಡಿದ್ದೇನೆ ಎನ್ನುತ್ತಾರೆ. ಆದರೆ, ಇಲ್ಲಿವರೆಗೂ ಹದ್ದುಬಸ್ತು ಮಾಡಿಕೊಟ್ಟಿಲ್ಲ. ರೈತರು ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆದು ತೆಂಗು, ಅಡಿಕೆ ಬೆಳೆಸಿ ದಶಕಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಈಗ ಏಕಾಏಕಿ ಅರಣ್ಯ ಇಲಾಖೆ ಈ ಭೂಮಿ ನಮ್ಮದೆಂದು ಹೇಳಿಕೊಂಡು, ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರೈತರ ಮೇಲಿನ ದಬ್ಬಾಳಿಕೆ ಹೀಗೆ ಮುಂದುವರಿದರೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದರು.
ಸಭೆಯಲ್ಲಿ ರೈತ ಮುಖಂಡರಾದ ಅಲ್ಲಾಬಕಾಶ್ ತಿಮ್ಮೇಗೌಡ, ಸಿದ್ದಯ್ಯ ಬಳುವನೇರಲು, ಎಂ. ನಾಗೇಶ್, ಕೆಳಹಟ್ಟಿ ಶ್ರೀಕಾಂತ್, ಬಿಳಿಗೆರೆ ನಾಗೇಶ್, ರಾಜಮ್ಮ, ಶಂಕರಲಿಂಗಯ್ಯ ಇತರರು ಇದ್ದರು.
ತಿಪಟೂರಿನಲ್ಲಿ ರಾಜ್ಯ ರೈತ ಸಂ ಮತ್ತು ಹಸಿರುಸೇನೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಿಮ್ಲಾಪುರ ದೇವರಾಜ್, ಆರ್.ಎಸ್.ಚನ್ನಬಸವಣ್ಣ, ಸಿದ್ದಬಸಪ್ಪ, ಸದಾಶಿವಯ್ಯ, ರಂಗಧಾಮಯ್ಯ ಹಳೇಪಾಳ್ಯ ಇತರರು ಇದ್ದರು.