ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್
ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು(ಆರ್‌ಬಿಐ), ಬ್ಯಾಂಕ್‌ನಲ್ಲಿ ಚಿನ್ನಾಭರಣ ಗಿರವಿ ಇಟ್ಟು ಸಾಲ ಪಡೆಯುವ ನಿಯಮಗಳ ಬದಲಾವಣೆ ಮಾಡಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಬಿಐನ ಪ್ರಧಾನ ವ್ಯವಸ್ಥಾಪಕಿ ಮೀನಾಕ್ಷಿ ಘಾಟ್ ಮತ್ತು ವ್ಯವಸ್ಥಾಪಕಿ ವಿಜಯಶ್ರೀಗೆ ಗುರುವಾರ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ನಿಯಮ ಬದಲಾವಣೆ ಕುರಿತು ಆರ್‌ಬಿಐ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದನ್ನು ಕೇಂದ್ರ ಕಚೇರಿಗೆ ಕಳುಹಿಸುವುದಾಗಿ ನಮಗೆ ಭರವಸೆ ನೀಡಿದ್ದಾರೆ. ಸಂಕಷ್ಟದಲ್ಲಿ ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಮತ್ತು ಆಸ್ಪತ್ರೆ ವೆಚ್ಚ ಸೇರಿ ಮುಂತಾದ ತುರ್ತು ಅಗತ್ಯಗಳಿಗೆ ಸಾಕಷ್ಟು ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಚಿನ್ನ ಅಡವಿ ಇಟ್ಟು ಸಾಲ ಪಡೆಯುತ್ತಾರೆ.ಸಾಲ ಪಡೆಯುವ ನಿಯಮಗಳ ಬದಲಾವಣೆಯಿಂದ ಖಾಸಗಿ ಫೈನಾನ್ಸ್‌ಗಳಿಗೆ ಹಾಗೂ ಮನಿಲೆಂಡರ್ಸ್‌ಗೆ ಅನುಕೂಲವಾಗಲಿದೆ. ಸಿಬಿಲ್ ಸ್ಕೋರ್, ಆದಾಯ ಪ್ರಮಾಣ ಪತ್ರ ಮತ್ತು ಪ್ಯಾನ್ ಕಾರ್ಡ್ ಸಲ್ಲಿಸಿ ಸಾಲ ಪಡೆಯುವಂತೆ ನಿಯಮ ರೂಪಿಸಲಾಗಿದ್ದು, ಇದನ್ನು ರದ್ದುಪಡಿಸಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಸಕಾಲಕ್ಕೆ ಸಾಲ ತೀರಿಸದ ರೈತರ ಜಮೀನು, ಮನೆ ಜಪ್ತಿ ಮಾಡಿ ಹರಾಜು ಹಾಕುವ ಸರ್ಪೈಸಿ ಕಾಯ್ದೆಯನ್ನು ರದ್ದುಗೊಳಿಸಬೇಕು. ಈ ಕಠಿಣ ನಿಯಮದಿಂದ ರೈತರು ಜಮೀನು, ಮನೆ ಕಳೆದುಕೊಳ್ಳುತ್ತಾರೆ. ಚಿನ್ನ ಗಿರವಿ ಇಡುವ ಸಂದರ್ಭದಲ್ಲಿ ಒಂದು ಎಕರೆಗೆ ಒಂದು ಲಕ್ಷ ರೂ.ಸಾಲ ನೀಡುವ ನಿಯಮವನ್ನು ರದ್ದುಗೊಳಿಸಬೇಕು. ರೈತರಿಗೆ ನೀಡುವ ಎಲ್ಲ ಬೆಳೆ ಸಾಲಗಳಿಗೆ ದೀರ್ಘಾವಧಿಯಾಗಿರಬೇಕು. ರೈತರ ಮಕ್ಕಳು, ಕುಟುಂಬ ಸದಸ್ಯರಿಗೆ ಶೈಕ್ಷಣಿಕ ಸಾಲ ನೀಡುವಾಗ ಯಾವುದೇ ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂದು ಸಲಹೆ ನೀಡಿದರು.