ಹುಲಸೂರು ತಾಲೂಕು ಪಂಚಾಯಿತಿ ಕಚೇರಿ ಮುಂದೆ ಗುರುವಾರ ದನದ ಕೊಟ್ಟಿಗೆ ಬಿಲ್​ ನೀಡಲು ಒತ್ತಾಯಿಸಿ ಬೇಲೂರ ರೈತರು ಜಾನುವಾರುಗಳೊಂದಿಗೆ ಆಗಮಿಸಿರುವುದು. 
ರಾಜ್ಯ

ತಾಪಂ ಕಚೇರಿಗೆ ಜಾನುವಾರು ಕಟ್ಟಿ ರೈತರ ಮುತ್ತಿಗೆ

ಪ್ರಮುಖ ಮುಖ್ಯಾಂಶಗಳು

  • ದನದ ಕೊಟ್ಟಿಗೆ ಬಿಲ್​ಗೆ ಬೇಲೂರ ಅನ್ನದಾತರ ಆಗ್ರಹ
ಹುಲಸೂರು: ದನದ ಕೊಟ್ಟಿಗೆ ಬಿಲ್​ ಪಾವತಿಸುವಂತೆ ಒತ್ತಾಯಿಸಿ ಗುರುವಾರ ಬೇಲೂರು ಗ್ರಾಮದ ರೈತರು ಗುರುವಾರ ತಾಲೂಕು ಪಂಚಾಯಿತಿ ಕಚೇರಿ ಗೇಟ್​ಗೆ ಜಾನುವಾರುಗಳನ್ನು ಕಟ್ಟಿ ಮುತ್ತಿಗೆ ಹಾಕಿದರು.
ಬೇಲೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎರಡು ನೂರಕ್ಕೂ ಹೆಚ್ಚು ರೈತರು ದನದ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ 40 ರೈತರ ಹೆಸರು ಉದ್ದೇಶಪೂರ್ವಕವಾಗಿ ರದ್ದು ಮಾಡಲಾಗಿದ್ದು, ಅವುಗಳನ್ನು ಪರಿಶೀಲಿಸಿ ತಣವೇ ಬಿಲ್​ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಮನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ್ದರೂ ಹಲವು ವರ್ಷಗಳಿಂದ ಬಿಲ್​ ಪಾವತಿಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಸಿದ್ಧಗೊಂಡಿದ್ದ ಬಿಲ್​ಗಳನ್ನು ಎಫ್​ಟಿಒ ವ್ಯವಸ್ಥೆಯಿಂದ ಅಳಿಸಲಾಗಿದೆ ರೈತರು ಆರೋಪಿಸಿದರು.
ಪ್ರಗತಿಪರ ರೈತ ಅಪ್ಪು ಮಡಿಕೆ ಮಾತನಾಡಿ, ಹೊಲದಲ್ಲಿನ ದನಕರುಗಳಿಗಾಗಿ ಕೊಟ್ಟಿಗೆ ನಿರ್ಮಿಸಿ ವರ್ಷಗಳೇ ಕಳೆದರೂ ಬಿಲ್​ ಪಾವತಿಯಾಗಿಲ್ಲ. ಈ ಕುರಿತು ಗ್ರಾಪಂ ಹಾಗೂ ತಾಪಂ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಬೆಳಗ್ಗೆ 10ರಿಂದ ಆರಂಭವಾದ ಪ್ರತಿಭಟನೆಯಲ್ಲಿ ಹಸು ಹಾಗೂ ಎತ್ತುಗಳನ್ನು ತಾಪಂ ಕಚೇರಿ ಗೇಟ್​ಗೆ ಕಟ್ಟಿ ಅಧಿಕಾರಿಗಳ ವಿರುದ್ಧ ೂಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಮಹಾದೇವ ಜಮ್ಮು ಅವರು ರೈತರ ಅಹವಾಲು ಆಲಿಸಿದರು. ಈ ವೇಳೆ ರೈತರು ಮತ್ತು ಅಧಿಕಾರಿಗಳ ನಡುವೆ ಕೆಲಕಾಲ ವಾಗ್ವಾದ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕೊನೆಗೆ ರೈತರ ಕೊಟ್ಟಿಗೆಗಳ ಪರಿಶೀಲನೆಗೆ ವಿಶೇಷ ತಂಡ ರಚಿಸಿ ಪೂರ್ಣಗೊಂಡ ಕಾಮಗಾರಿಗಳ ವರದಿ ಆಧರಿಸಿ ಮುಂದಿನ ತಿಂಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಬಿಲ್​ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಇಒ ಭರವಸೆ ನೀಡಿದರು. ಇದಕ್ಕೆ ರೈತರು ಒಂದು ತಿಂಗಳ ಕಾಲಾವಕಾಶ ನೀಡಲು ಒಪ್ಪಿಕೊಂಡ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ರೈತ ಅಪ್ಪು ಮಡಿಕೆ, ಗ್ರಾಪಂ ಸದಸ್ಯರಾದ ಲೊಕೇಶ ಮೂಲಿಮನೆ, ಸಂಗಪ್ಪ ರೊಂಟೆ, ಸಂಜುಕುಮಾರ ಮಾಶೆಟ್ಟೆ, ಮಹಾದೇವ ಮಹಾಜನ, ಸಂಗಪ್ಪ ಕವಟೆ, ಗುರುನಾಥ ಹಲ್ಲಿಂಗೆ, ಬಾಬುರಾವ ಹಿರನಾಗಾಂವ, ರಾಜಕುಮಾರ ಹೊಳ್ಳೆ, ಪ್ರಶಾಂತ ಗುಂಗೆ, ಅನಿಲ ಬಡೂರೆ, ಲೊಕೇಶ ಹರಿಗೆ, ಹಣಮಂತ ಮಾಶೆಟ್ಟ, ನವೀನ ಗುಂಗೆ, ಸಾಗರ ಚಿನ್ನಕೋಟೆ ಇತರರಿದ್ದರು.
"

ಕೋಟ್​ ನಮ್ಮ ಹೊಲದಲ್ಲಿ ಒಂದು ವರ್ಷದ ಹಿಂದೆ ಸ್ವಂತ ಖರ್ಚಿನಲ್ಲಿ ದನದ ಕೊಟ್ಟಿಗೆ ನಿರ್ಮಿಸಿಕೊಂಡಿದ್ದೇನೆ. ಸ್ಥಳಕ್ಕೆ ಪಿಡಿಒ ಹಾಗೂ ಜೆಇ ಆಗಮಿಸಿ ಜಿಪಿಎಸ್​ ಮಾಡಿದ್ದಾರೆ. ಇವಾಗ ನಿಮ್ಮ ಕೊಟ್ಟಿಗೆ ರದ್ದಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಸಾಲ ಮಾಡಿ ಕೊಟ್ಟಿಗೆ ನಿರ್ಮಿಸಿದ್ದು, ಹಣ ಬರದಿದ್ದರೆ ತಾಪಂ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. > ಪಪ್ಪು ಮಡಕೆ ರೈತ ಬೇಲೂರ

— ಪಪ್ಪು ಮಡಕೆ ರೈತ ಬೇಲೂರ
"

ತಾಲೂಕಿನ ಬೇಲೂರ ಗ್ರಾಮದಲ್ಲಿ ಬಹುತೇಕ ರೈತರಿಗೆ ಕೊಟ್ಟಿಗೆ ಹಣ ಪಾವತಿಸಿದ್ದೇವೆ. ಇನ್ನೂ ಕೆಲವರಿಗೆ ಹಣ ತಲುಪಿಲ್ಲ. ಅಂತಹ ಕೊಟ್ಟಿಗೆ ಪರಿಶೀಲಿಸಿ ಆದಷ್ಟು ಬೇಗನೆ ಹಣ ಪಾವತಿ ಮಾಡುತ್ತೇವೆ ರೈತರು ಸಹಕರಿಸಬೇಕು.

— ಮಹಾದೇವ ಜಮ್ಮು ತಾಪಂ ಇಒ ಹುಲಸೂರು