ಕಬ್ಬು  
ರಾಜ್ಯ

ರೊಕ್ಕದ ಬೆಳೆ ನಂಬಿದ ರೈತ ತಬ್ಬಿಬ್ಬು

ಪ್ರಮುಖ ಮುಖ್ಯಾಂಶಗಳು

  • ಹನಿ ನೀರಿಲ್ಲದೆ ಕಹಿಯಾಗುತ್ತಿರುವ ಕಬ್ಬು
  • ಸಕ್ಕರೆ ಕಾರ್ಖಾನೆಗಳಿಗೆ ಸಮರ್ಪಕ ಉತ್ಪನ್ನ ಸಿಗುವುದೇ ಡೌಟು
ಕಲಬುರಗಿ: ಸಕ್ಕರೆ ಕಾರ್ಖಾನೆಗಳ ಹೆಚ್ಚಳ ಜತೆ ಅಧಿಕ ಆದಾಯದ ನಿರೀಕ್ಷೆಯೊಂದಿಗೆ ರೈತರು ವಾಣಿಜ್ಯ ಬೆಳೆ ಕಬ್ಬಿಗೆ ಆದ್ಯತೆ ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಬ್ಬು ಪ್ರದೇಶ ಹೆಚ್ಚಾಗುತ್ತಿದೆ. ಆದರೆ ಜುಲೈ ಮುಗಿಯುತ್ತ ಬಂದರೂ ಮುಂಗಾರು ನಿರೀಕ್ಷಿತ ಮಳೆಯಾಗದ್ದರಿಂದ ಕೃಷಿಕರಿಗೆ ಕಬ್ಬು ಸಿಹಿ ಬದಲು ಕಹಿಯಾಗಿ ಪರಿಣಮಿಸಲಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ 36 ಸಾವಿರ ಹೆಕ್ಟೇರ್​ನಲ್ಲಿದ್ದ ಕಬ್ಬು ಈ ಬಾರಿ 39-40 ಸಾವಿರ ಹೆಕ್ಟೇರ್​ಗೆ ಏರಿಕೆಯಾಗಿದೆ. ಕಬ್ಬಿಗೆ ಲಾಗೋಡಿ ಜತೆ ಶ್ರಮವೂ ಕಮ್ಮಿ. ಟನ್​ಗೆ ಸುಮಾರು 3000 ರೂ. ದರ ಸಿಗಲಿದೆ. ಈ ಎಲ್ಲ ಸಂಗತಿ ಪರಿಗಣಿಸಿ ಮತ್ತು ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೇಡಿಕೆಯೂ ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿ ರೈತ ಕಬ್ಬಿನ ಹಿಂದೆ ಬಿದ್ದಿದ್ದಾನೆ. ಆದರೆ ಮಳೆ ಹೊಡೆತದಿಂದ ಆತನ ಲೆಕ್ಕಾಚಾರ ತಲೆಕೆಳಗಾಗಿದೆ.
ಸದ್ಯ ಜಿಲ್ಲೆಯಲ್ಲಿ ಐದು ಸಕ್ಕರೆ ಕಾರ್ಖಾನೆಗಳಿದ್ದು, ಹೊಸದಾಗಿ ಜೇವರ್ಗಿ ತಾಲೂಕು ಕೂಡಿ, ಚಿಗರಳ್ಳಿ ಮತ್ತು ಹೋಳಕುಂದಾ, ಸಾವಳಗಿಗಳಲ್ಲಿ ಕಾರ್ಖಾನೆಗಳು ಶುರುವಾಗಲಿವೆ. ಒಂದು ಕಾರ್ಖಾನೆ 10 ಲಕ್ಷ ಟನ್​ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಂದರೆ ಒಂಬತ್ತು ಕಾರ್ಖಾನೆಗಳಿಗೆ 90-100 ಲಕ್ಷ ಟನ್​ ಕಬ್ಬು ಬೇಕು. ಆದರೆ ಈಗಿನ ಲೆಕ್ಕಾಚಾರದಂತೆ 43 ಲಕ್ಷ ಟನ್​ ಕಬ್ಬು ಉತ್ಪಾದನೆ ಆಗುತ್ತಿದೆ. ಹೀಗಾಗಿ ಕಾರ್ಖಾನೆಗಳ ಪರಿಸ್ಥಿತಿ ಗಂಭೀರವಾಗುವ ಲಕ್ಷಣ ಗೋಚರಿಸಿದೆ.
ಎಕರೆ ಕಬ್ಬಿಗೆ ಬೀಜ-ಗೊಬ್ಬರ ಸೇರಿ 35-40 ಸಾವಿರ ರೂ. ಖರ್ಚಾಗುತ್ತದೆ. ವಿದ್ಯುತ್​ ಕಣ್ಣಾಮುಚ್ಚಾಲೆ ರೈತರನ್ನು ಇನ್ನಷ್ಟು ಸಂಕಷ್ಟದ ಕೂಪಕ್ಕೆ ತಳ್ಳುತ್ತಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 25 ಸಾವಿರದಂತೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಕಬ್ಬು ರೈತರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದು ಕೃಷಿಕರ ಅಳಲು.
ಬರಿದಾದ ಹಳ್ಳ-ಕೊಳ್ಳಗಳ ಒಡಲು
ಬೇಸಿಗೆಯಲ್ಲಿನ ಪ್ರಖರ ಬಿಸಿಲಿಗೆ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ಬರಿದಾಗಿವೆ. ತೆರೆದ ಬಾವಿ, ಕೊಳವೆಬಾವಿ, ನಾಲೆ, ಹಳ್ಳ, ನದಿ ನೀರು ಕಬ್ಬು ಬೆಳೆಗೆ ಆಧಾರ. ಆದರೆ ಈವರೆಗೆ ಉತ್ತಮ ಮುಂಗಾರು ಮಳೆಯಾಗದ್ದರಿಂದ ಸಣ್ಣಪುಟ್ಟ ಕೆರೆ ಹಳ್ಳಗಳಲ್ಲಿ ಹನಿ ನೀರಿಲ್ಲ. ಬೋರ್​ವೆಲ್​ಗಳಲ್ಲೂ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಭರ್ಜರಿ ಮಳೆಯಾದರೆ ಮಾತ್ರ ಅಂತರ್ಜಲ ಮಟ್ಟ ಹೆಚ್ಚಳವಾಗಿ ಹಳ್ಳ-ಕೊಳ್ಳಗಳು ಭರ್ತಿಯಾಗಲಿವೆ. ಕಬ್ಬು ಬೆಳೆಗೂ ಅನುಕೂಲವಾಗಲಿದೆ. ಆದರೆ ಸದ್ಯದ ಸ್ಥಿತಿಯಂತೂ ಬಲು ಗಂಭೀರವಾಗಿದೆ.
ತಪ್ಪದ ಕೃಷಿಕರ ಗೋಳು
ಈ ಮೊದಲು ಜೇವರ್ಗಿ, ಅಫಜಲಪುರ ಮತ್ತು ಆಳಂದ ತಾಲೂಕಿಗೆ ಸೀಮಿತವಾಗಿದ್ದ ಕಬ್ಬು ಇದೀಗ ಚಿಂಚೋಳಿ ಸಿದ್ಧಸಿರಿ ಕಾರ್ಖಾನೆ ಪ್ರಾರಂಭವಾದ ನಂತರ ಚಿಂಚೋಳಿ, ಕಾಳಗಿ, ಸೇಡಂ, ಕಮಲಾಪುರ ಭಾಗದಲ್ಲೂ ಕಬ್ಬು ಬೆಳೆಯಲಾಗುತ್ತಿದೆ. ಈ ಬೆಳೆಗೆ ಸಮರ್ಪಕ ನೀರು ಬೇಕು. ಆದರೆ ನಿರೀತ ಪ್ರಮಾಣದ ಮಳೆ ಬೀಳುತ್ತಿಲ್ಲ. ಒಂದು ಬಾರಿ ಕಬ್ಬು ಹಾಕಿದರೆ ಕನಿಷ್ಟ ಮೂರು ವರ್ಷ ನಿರಂತರ ನಡೆಯುತ್ತದೆ. ಈಗ ಲಭ್ಯವಿದ್ದ ನೀರು ಅಬ್ಬಬ್ಬಾ ಅಂದ್ರೂ ತಿಂಗಳು ಸಾಕಾಗಬಹುದು. ಬಳಿಕವೂ ಮಳೆರಾಯ ಕೃಪೆ ತೋರದಿದ್ದರೆ ಕಬ್ಬು ಬೆಳೆಗಾರನ ಕಥೆ ಮುಗಿದಂತೆಯೇ. ಇನ್ನೊಂದೆಡೆ ಜಿಲ್ಲೆಯ ಕೆಲವೆಡೆ ಬಿತ್ತನೆ ಮಾಡಿದ ತೊಗರಿ, ಹೆಸರು ಬೆಳೆ ನೆಲಕಚ್ಚುತ್ತಿದೆ. ಹೀಗಾಗಿ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.
"

ಕಬ್ಬು ಪ್ರದೇಶ ಹೆಚ್ಚಳವಾಗುತ್ತಿದೆ. ಕೊಳವೆಬಾವಿ, ನದಿ, ಹಳ್ಳ-ಕೊಳ್ಳಗಳಲ್ಲಿ ನೀರಿದ್ದರೆ ಈ ಬೆಳೆ ಚೆನ್ನಾಗಿ ಬೆಳೆಯುತ್ತದೆ. ಆದರೆ ಮಳೆ ಕೊರತೆಯಿಂದ ನೀರಿನ ಪ್ರಮಾಣ ಕುಸಿದಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

— > ಸಮದ್​ ಪಟೇಲ್​ ಜಂಟಿ ಕೃಷಿ ನಿರ್ದೇಶಕ
"

ತೀವ್ರ ಬರದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಸಣ್ಣಪುಟ್ಟ ಹಳ್ಳಗಳು ಸಹ ಬತ್ತಿ ಬರಿದಾಗಿವೆ. ಹೀಗಾಗಿ ಕಬ್ಬು ಮೇಲೇಳುವುದು ಕಷ್ಟ. ಇಂಥ ಸ್ಥಿತಿಯಲ್ಲಿ ಎಕರೆ ಕಬ್ಬಿಗೆ 50 ಸಾವಿರ ರೂ. ಪರಿಹಾರ ನೀಡಿ ತೊಂದರೆಗೆ ಒಳಗಾಗಿರುವ ರೈತನ ನೆರವಿಗೆ ಸರ್ಕಾರ ಧಾವಿಸಬೇಕು.

— > ಜಗದೀಶ ಪಾಟೀಲ್​ ರಾಜಾಪುರ ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ ಕಲಬುರಗಿ