ಮೆಕ್ಕೆಜೊಳಕ್ಕೆ ಬೆಂಬಲ ಬೆಲೆ ನಿಗದಿ ಮಾಡಲು ಆಗ್ರಹಿಸಿ ರೈತ ಮುಖಂಡರು ಮನವಿ ಸಲ್ಲಿಸಿದರು. ಸಂತೋಷ ಕುರಿ,ತಿಪ್ಪಣ್ಣ ಕೊಂಚಿಗೇರಿ,ರವಿಕಾಂತ ಅಂಗಡಿ, ಗೂಳಪ್ಪ ಕರಿಗಾರ, ಗಿರಿಜಾ ಪೂಜಾರ, ಎಚ್. ಜೆ. ಭಾವಿಕಟ್ಟಿ ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಶಿರಹಟ್ಟಿ
ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಸರ್ಕಾರವು ಪ್ರತಿ ಕ್ವಿಂಟಲ್ಗೆ ₹3,000 ಬೆಂಬಲ ಬೆಲೆಯನ್ನು ತಕ್ಷಣವೇ ನಿಗದಿಪಡಿಸಬೇಕು ಮತ್ತು ತಾಲೂಕು ಕೇಂದ್ರದಲ್ಲಿ ಗೋವಿನಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಒತ್ತಾಯಿಸಿ ಶಿರಹಟ್ಟಿ ತಾಲೂಕು ಸಮಗ್ರ ರೈತ ಹೋರಾಟ ಸಮಿತಿ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರೈತರು ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಮೆಕ್ಕೆಜೋಳಕ್ಕೆ ಪ್ರತಿವರ್ಷ ಸರಿಯಾದ ಬೆಲೆ ಸಿಗದೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗುತ್ತಿದ್ದು, ಸಾಲಬಾಧೆಯಿಂದ ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ₹3,000 ಕನಿಷ್ಠ ಬೆಂಬಲ ಬೆಲೆ ನೀಡಲು ಮುಂದಾಗಬೇಕು ಎಂದು ಮುಖಂಡ ಸಂತೋಷ ಕುರಿ ಎಂದು ಹೇಳಿದರು.
ಕಳೆದ ವರ್ಷ ಕ್ವಿಂಟಲ್ಗೆ ₹2,400 ರಿಂದ ₹2,800 ಬೆಲೆ ಸಿಕ್ಕಿತ್ತು. ಆದರೆ, ಈ ಬಾರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬಿತ್ತನೆಗೆ ಮಾಡಿದ ಖರ್ಚು ಕೂಡ ಮರಳಿ ಬರುತ್ತಿಲ್ಲ. ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ ಎಂದರು
ತಾಲೂಕಿನಲ್ಲಿ 30,919 ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದರೂ, ಮಳೆಯಿಂದಾಗಿ ಅರ್ಧಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ದಲ್ಲಾಳಿಗಳು ಮತ್ತು ಖರೀದಿದಾರರು ಕಡಿಮೆ ಬೆಲೆಗೆ ಖರೀದಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಬೆಂಬಲ ಬೆಲೆ ಘೋಷಣೆ ಹಾಗೂ ಖರೀದಿ ಕೇಂದ್ರ ತೆರೆಯುವ ವಿಚಾರದಲ್ಲಿ ಕೃಷಿ ಮಂತ್ರಿಗಳು ಮತ್ತು ಪ್ರತಿಪಕ್ಷದ ನಾಯಕರು ರಾಜಕೀಯ ಕೆಸರೆರಚಾಟ ನಡೆಸುತ್ತಿದ್ದು, ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡರಾದ ತಿಪ್ಪಣ್ಣ ಕೊಂಚಿಗೇರಿ ಮತ್ತು ರವಿಕಾಂತ ಅಂಗಡಿ ಮಾತನಾಡಿ, ಕೇಂದ್ರ ಸರ್ಕಾರ ಘೋಷಿಸಿರುವ ₹2,400 ಬೆಂಬಲ ಬೆಲೆಗೆ ರಾಜ್ಯ ಸರ್ಕಾರವು ₹600 ಪ್ರೋತ್ಸಾಹಧನ ಸೇರಿಸಿ, ಒಟ್ಟು ₹3,000ಕ್ಕೆ ಕ್ವಿಂಟಲ್ ಗೋವಿನಜೋಳ ಖರೀದಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿನ ಬೆಲೆ ಇಳಿಕೆಯನ್ನು ಸರ್ಕಾರ ನಿಯಂತ್ರಿಸಿ, ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಶಿರಸ್ತೇದಾರ ಗಿರಿಜಾ ಪೂಜಾರ ಮತ್ತು ಎಚ್.ಜೆ. ಭಾವಿಕಟ್ಟಿ ಅವರು ರೈತರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗೂಳಪ್ಪ ಕರಿಗಾರ, ಸಂದೀಪ ಕಪ್ಪತ್ತನವರ, ಯಲ್ಲಪ್ಪ ಇಂಗಳಗಿ, ಫಕ್ಕೀರೇಶ ಕರಿಗಾರ, ಸುರೇಶ ಹವಳದ, ಫಕ್ಕಿರೇಶ ನಿಟ್ಬಾಲಿ, ಕಾಳಪ್ಪ ಬಡಿಗೇರ, ಫಕ್ಕೀರೇಶ ಡಂಬಳ, ಫಕ್ಕೀರೇಶ ಸಂಶಿಮಠ, ರಾಜೇಶ ಸರ್ಜಾಪೂರ, ಪ್ರಕಾಶ ಕುಳಗೇರಿ, ಶಿವಾನಂದ ಬಟ್ಟೂರ, ಬಸವರಾಜ ಕಲ್ಯಾಣಿ, ಪರಶುರಾಮ ಡೊಂಕಬಳ್ಳಿ, ರವಿ ಹಳ್ಳಿ, ನಾಗರಾಜ ಇಂಗಳಗಿ, ಕೆ.ಬಿ.ಬಳುಟಗಿ ಉಪಸ್ಥಿತರಿದ್ದರು.