ವಿದ್ಯುತ್​ ತಗುಲಿ ಮೃತಪಟ್ಟ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಅಫಜಲಪುರದ ಬಸವೇಶ್ವರ ವೃತ್ತದಲ್ಲಿ ಸಂಚಾರ ತಡೆದು ರೈತರು ಪ್ರತಿಭಟನೆ ನಡೆಸಿದರು. ಶ್ರೀಮಂತ ಬಿರಾದಾರ, ಲಚ್ಚಪ್ಪ ಜಮಾದಾರ, ರಮೇಶ ಹೂಗಾರ, ಶಾಂತಕುಮಾರ ಅಂಜುಟಗಿ, ರಮೇಶ ಶೆಟ್ಟಿ ಇತರರಿದ್ದರು. 
ರಾಜ್ಯ

ಅಳ್ಳಗಿಯಲ್ಲಿ ವಿದ್ಯುತ್​ಗೆ ರೈತ ಬಲಿ

ಪ್ರಮುಖ ಮುಖ್ಯಾಂಶಗಳು

  • ಪರಿಹಾರಕ್ಕಾಗಿ ಅಫಜಲಪುರದ ಬಸವೇಶ್ವರ ವೃತ್ತದಲ್ಲಿ ಸಂಚಾರ ತಡೆದು ಹೋರಾಟ
ಅಫಜಲಪುರ: ಕೃಷಿ ಕಾರ್ಯ ಮಾಡುತ್ತಿದ್ದಾಗ ವಿದ್ಯುತ್​ ತಂತಿ ತಗುಲಿ ರೈತನೋರ್ವ ಮೃತಪಟ್ಟ ಘಟನೆ ಅಳ್ಳಗಿ (ಕೆ) ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಅಳ್ಳಗಿ (ಕೆ) ಗ್ರಾಮದ ಬಸಪ್ಪ ಪೂಜಾರಿ(45) ಮೃತ ರೈತ. ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಸಹೋದರರಿದ್ದಾರೆ. ಎಂದಿನಂತೆ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಕೆಳಗೆ ಬಿದ್ದಿದ್ದ ವಿದ್ಯುತ್​ ತಂತಿ ತುಳಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ರೈತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ, ಸರ್ಕಾರ ಹಾಗೂ ಜೆಸ್ಕಾಂ ನಿರ್ಲಕ್ಷದಿಂದಲೇ ರೈತ ಮೃತಪಟ್ಟಿದ್ದಾನೆ. ಕೂಡಲೇ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಹೇಶ ಮೇಣ್ಣವರ್​, ಡಿವೈಎಸ್​ಪಿ ತಮ್ಮಾರಾಯ ಪಾಟೀಲ್​, ಜೆಸ್ಕಾಂ ಇಇ ಮುರುಶ ಮಠಪತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ನಿಮ್ಮೆಲ್ಲ ಬೇಡಿಕೆ ಈಡೇರಿಸಲಾಗುವುದು. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಅಧಿಕಾರಿಗಳ ಭರವಸೆ ಮೇರೆಗೆ ಹೋರಾಟ ಕೈಬಿಡಲಾಯಿತು. ತಹಸೀಲ್ದಾರ್​ ಸಂಜೀವಕುಮಾರ ದಾಸರ, ಎಇಇ ನಾಗರಾಜ ಕೆ., ಸಿಪಿಐಗಳಾದ ಲಖನ್​ ಮಸಗುಪ್ಪಿ, ಸುನೀಲ್​ ಕರಾಡೆ, ಪಿಎಸ್​ಐಗಳಾದ ಸೋಮನಿಂಗ ಒಡೆಯರ, ಮಲ್ಲಯ್ಯ ಕರಾಸಿ, ವಾತ್ಸಲ್ಯ ಬಿರಾದಾರ ಜತೆಗಿದ್ದರು.
ಪ್ರಮುಖರಾದ ಜೆ.ಎಂ.ಕೊರಬು, ಶ್ರೀಮಂತ ಬಿರಾದಾರ, ಲಚ್ಚಪ್ಪ ಜಮಾದಾರ, ರಮೇಶ ಪೂಜಾರಿ, ರಮೇಶ ಹೂಗಾರ, ಶಾಂತಕುಮಾರ ಅಂಜುಟಗಿ, ರಮೇಶ ಶೆಟ್ಟಿ, ರಮೇಶ ಪಾಟೀಲ್​, ಸಿದ್ದು ಮಗಿ, ಇಮಾಮ್​ ಪಟೇಲ್​, ನೂರಹ್ಮದ್​ ಭಾಗವಾನ್​, ಅಂಬಾರಾಯ ಹಿಂದಿನಮನಿ, ಆನಂದ ಪಾಟೀಲ್​, ಅರ್ಜುನ ಕಲ್ಲೂರ, ಶ್ರೀಶೈಲ ಹೊಸಮನಿ, ಹಣಮಂತ ಪೂಜಾರಿ, ಬೀರಣ್ಣ ಕನಕಟೇಲರ್​, ಮಲಕಯ್ಯ ಸ್ವಾಮಿ, ರಮೇಶ ಪೂಜಾರಿ, ಭೀಮಣ್ಣ ಪೂಜಾರಿ, ಮಹಾಂತಪ್ಪ ಶಿಂಧೆ, ಸೂರ್ಯಕಾಂತ ಪವಾರ್​, ಸಂಗನಗೌಡ ಪಾಟೀಲ್​, ರೇವೂಬಾ ಪಾಟೀಲ್​ ಇತರರಿದ್ದರು.
ಏಳು ಗಂಟೆ ಮುಖ್ಯರಸ್ತೆ ಸಂಚಾರ ಬಂದ್​
ಅಳ್ಳಗಿ (ಕೆ) ಗ್ರಾಮದ ರೈತ ಬಸಪ್ಪ ಪೂಜಾರಿ ಸಾವಿಗೆ ನ್ಯಾಯ ಕಲ್ಪಿಸಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತರು ಸುಮಾರು 7 ಗಂಟೆಗಳ ಕಾಲ ಹೋರಾಟ ನಡೆಸಿದರು. ಅಫಜಲಪುರದ ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ 11ಕ್ಕೆ ಪ್ರತಿಭಟನೆ ಆರಂಭಿಸಲಾಯಿತು. ಟೈರ್​ಗೆ ಬೆಂಕಿ ಹಚ್ಚಿ ಸರ್ಕಾರ ಹಾಗೂ ಜೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಮುಖ್ಯ ರಸ್ತೆಯಲ್ಲಿಯೇ ಹೋರಾಟ ಆರಂಭಿಸಿದ್ದರಿಂದ 7 ತಾಸು ಸಂಚಾರ ಬಂದ್​ ಆಗಿತ್ತು. ಕಲಬುರಗಿ, ಸೋಲಾಪುರ, ವಿಜಯಪುರ, ಮೋರಟಗಿ ಭಾಗಕ್ಕೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಅಧಿಕಾರಿಗಳ ಭರವಸೆ ಬಳಿಕ ಸಂಜೆ 6ಕ್ಕೆ ಹೋರಾಟ ಅಂತ್ಯವಾಯಿತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
"

ರೈತ ಬಸಪ್ಪ ಪೂಜಾರಿ ಅವರ ಪ್ರಾಣಕ್ಕೆ ಬೆಲೆ ಕಟ್ಟಲಾಗದು. ರೈತನ ಕುಟುಂಬಕ್ಕೆ ಇಲಾಖೆಯಿಂದ 5 ಲಕ್ಷ ರೂ., ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ಕೊಡಿಸಲಾಗುವುದು. ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾನವೀಯತೆ ಆಧಾರದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ನೌಕರರಿಂದ 8 ಲಕ್ಷ ರೂ. ನೀಡಲಾಗುವುದು.

— > ಮುರುಶ ಮಠಪತಿ, ಇಇ, ಜೆಸ್ಕಾಂ