ತೇರದಾಳದ ರೈತ ಸಂಪರ್ಕ ಕೇಂದ್ರ ಮುಂಭಾಗದಲ್ಲಿ ಅಕ್ರಮವಾಗಿ ಸ್ಥಾಪಿಸಿರುವ ಆಹಾರ ಕೊಕಾಗಳ ದಶ್ಯ.
- ಕ್ರಮವಿಲ್ಲದೆ ಪುರಸಭೆ ವಿರುದ್ಧ ಅಸಮಾಧಾನ
- ನಾಗರಿಕರು ಆಗ್ರಹ
ತೇರದಾಳ: ಪಟ್ಟಣದ ರೈತ ಸಂಪರ್ಕ ಕೇಂದ್ರ ಕಚೇರಿ ಮುಂಭಾಗದಲ್ಲಿ ನಾನ್‌ವೆಜ್ ಆಹಾರ ಮಾರಾಟದ ಕೊಕಾಗಳನ್ನು ಸ್ಥಾಪಿಸಿರುವುದು ರೈತರು ಹಾಗೂ ಕಚೇರಿ ಸಿಬ್ಬಂದಿಗೆ ತೊಂದರೆಯಾಗಿ ಪರಿಣಮಿಸಿದೆ. ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಸ್ಪಂದನೆ ದೊರಕದೆ, ಮೇ 26ರಂದು ಪುರಸಭೆಗೆ ಲಿಖಿತ ಅರ್ಜಿ ಸಲ್ಲಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಈ ಕೊಕಾಗಳು ಕಾರ್ಯನಿರ್ವಹಿಸುತ್ತಿದ್ದು, ಕಚೇರಿಗೆ ಆಗಮಿಸುವವರಿಗೆ ಮುಜುಗರ ಉಂಟಾಗುತ್ತಿದೆ. ಮಳೆಯ ನೀರು ತಡೆಯಲು ಹಾಕಿದ ತಾಡಪತ್ರಿಯಿಂದ ಹರಿಯುವ ನೀರು ಕಚೇರಿ ಆವರಣದಲ್ಲೇ ಬೀಳುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಆರಂಭದಲ್ಲಿ ಒಂದೇ ಇದ್ದ ಕೊಕಾಗಳ ಸಂಖ್ಯೆ ಈಗ ನಾಲ್ಕು-ಐದಕ್ಕೆ ಏರಿಕೆಯಾಗಿದೆ.
ಇತ್ತೀಚೆಗೆ ನಡೆದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದ ವೇಳೆ ಈ ಸಮಸ್ಯೆ ತೀವ್ರವಾಗಿ ವ್ಯಕ್ತವಾಗಿ, ಸ್ಥಳೀಯ ಮುಖಂಡರು ಅಧಿಕಾರಿಗಳ ನಿರ್ಲಕ್ಷೃಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ ಅವರ ಸಮ್ಮುಖದಲ್ಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಅಧಿಕಾರಿ ಎಸ್.ಎಂ. ಬಿರಾದಾರ ಸಹ ತಕ್ಷಣ ಕ್ರಮದ ಭರವಸೆ ನೀಡಿದರು.
ಆದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಅರ್ಜಿಯ ಮೇಲಿನ ಮೌನವು ಅನುಮಾನಗಳಿಗೆ ಕಾರಣವಾಗಿದೆ. ಸಮಸ್ಯೆ ಶೀಘ್ರ ಪರಿಹರಿಸಲು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.