Farewell to a teacher couple who served at the same school 
ರಾಜ್ಯ

ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕ ದಂಪತಿ ಬೀಳ್ಕೊಡುಗೆ

ತಾಲೂಕಿನ ಕೈವಾರ ಅಂಬೇಡ್ಕರ್​ ಅನುದಾನಿತ ಪ್ರೌಢಶಾಲೆಯಲ್ಲಿ 20 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ದಾವಣಗೆರೆ ಜಿಲ್ಲೆಯ ಶಿಕ್ಷಕ ದಂಪತಿ ಸಿ.ಉಮೇಶ್​ ಹಾಗೂ ಯೋಗಮ್ಮ ಮಲ್ಲಾಪುರ 3 ತಿಂಗಳ ಅಂತರದಲ್ಲಿ ನಿವೃತ್ತಿ ಹೊಂದಿರುವುದು ವಿಶೇಷ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಮುಖ್ಯಶಿಕ್ಷಕ ಸುರೇಶ್​ ಮಾತನಾಡಿ, ಇಬ್ಬರು ಶಿಕ್ಷಕರು ಸೇವಾ ಅವಧಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜತೆಗೆ ಶಿಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸುವ ಮೂಲಕ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಬದುಕನ್ನು ರೂಪಿಸಿದ್ದಾರೆ. ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದರು.
ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ನಂಜಪ್ಪ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ನೀಡಿದ ಕೊಡುಗೆ ಶ್ಲಾನೀಯವಾಗಿದೆ ಎಂದರು.
ನಿವೃತ್ತ ಶಿಕ್ಷಕ ಸಿ.ಉಮೇಶ್​ ಮಾತನಾಡಿ, 20 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ ಆಡಳಿತ ಮಂಡಳಿಗೆ ಹಾಗೂ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲ ಸಹೋದ್ಯೋಗಿಗಳಿಗೆ ಕೃತತೆ ಸಲ್ಲಿಸಿದರು.ಆಡಳಿತ ಮಂಡಳಿಯ ಎಸ್​.ಎಂ.ರೋಜಾ, ಧನುಷ್​ ಕುಮಾರ್​, ಶಿಕ್ಷಕರಾದ ಶ್ರೀಧರ್​ ಹಿರೇಮಠ, ಲೋಕೇಶಪ್ಪ, ವೆಂಕಟೇಶ್​ ಬಾಬು, ಮಂಜುಳಾ, ಭಾಗ್ಯಮ್ಮ, ಗೋಪಮ್ಮ, ರಮೇಶ್​ ಇದ್ದರು.