ಸಾಲದ ಶೂಲಕ್ಕೆ ಚಿನ್ನದ ವ್ಯಾಪಾರಿ ಕುಟುಂಬ ಬಲಿ: ಪತ್ನಿ, ಪುತ್ರನೊಂದಿಗೆ ಸಾವಿಗೆ ಶರಣಾದ ಜ್ಯುವೆಲರಿ ಶಾಪ್ ಮಾಲೀಕ! Family Death
- ಮಿತಿಮೀರಿದ ಸಾಲಬಾಧೆಗೆ ಒಂದೇ ಮನೆಯ ಮೂವರ ಬದುಕು ಕಮರಿತು
- ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕರಳು ಹಿಂಡುವ ಘಟನೆ
- ಹೆಂಡತಿ, ಮಗನೊಂದಿಗೆ ಬದುಕನ್ನೇ ಮುಗಿಸಿಕೊಂಡ ಜ್ಯುವೆಲರಿ ಶಾಪ್ ಮಾಲೀಕ
- ಒಂದೇ ಮನೆಯಲ್ಲಿ ಮೂವರ ಶವ ಕಂಡು ಮರುಗಿದ ನೆರೆಹೊರೆಯವರು
ಕೊಪ್ಪಳ: ಇಲ್ಲಿನ ಗಂಗಾವತಿ ನಗರದಲ್ಲಿ ಕರಳು ಹಿಂಡುವ ಘಟನೆಯೊಂದು ಸಂಭವಿಸಿದ್ದು, ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ಮೂವರು ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ( Family Death ) ಶರಣಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಇಡೀ ಕುಟುಂಬವೇ ಈ ರೀತಿಯ ಘೋರ ನಿರ್ಧಾರಕ್ಕೆ ಶರಣಾಗಿರುವುದು ಗಂಗಾವತಿ ನಗರದಾದ್ಯಂತ ತೀವ್ರ ಆಘಾತ ಮತ್ತು ಶೋಕದ ವಾತಾವರಣವನ್ನು ಸೃಷ್ಟಿಸಿದೆ.
ನಗರದ ಪ್ರಶಾಂತನಗರದಲ್ಲಿರುವ ನಿವಾಸದಲ್ಲಿ ಈ ದುರಂತ ನಡೆದಿದೆ. ಜ್ಯುವೆಲರಿ ಶಾಪ್ ನಡೆಸುತ್ತಿದ್ದ ಪ್ರಕಾಶ್ ರಾಯ್ಕರ್ (54), ಅವರ ಪತ್ನಿ ಪ್ರಭಾ (46) ಹಾಗೂ ಕೇವಲ 21 ವರ್ಷದ ಮಗ ಶಶಾಂಕ್ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕಾಶ್ ರಾಯ್ಕರ್ ಅವರು ಚಿನ್ನದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ಉಂಟಾದ ನಷ್ಟ ಹಾಗೂ ಮಿತಿಮೀರಿದ ಸಾಲಬಾಧೆಯಿಂದಾಗಿ ಕುಟುಂಬವು ತೀವ್ರ ಮಾನಸಿಕ ಒತ್ತಡವನ್ನು ಎದುರಿಸುತ್ತಿತ್ತು ಎನ್ನಲಾಗಿದೆ. ಸಾಲ ತೀರಿಸಲಾಗದೆ, ಮಾನಸಿಕವಾಗಿ ಜರ್ಜರಿತರಾಗಿದ್ದ ಕುಟುಂಬಸ್ಥರು ಕೊನೆಗೆ ಬದುಕನ್ನೇ ಮುಗಿಸಿಕೊಳ್ಳುವ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಗಂಗಾವತಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾಲಬಾಧೆಯ ಅಸಲಿ ಕಾರಣ ಹಾಗೂ ಬೇರೆನಾದರೂ ಹಣಕಾಸಿನ ವಿವಾದಗಳಿದ್ದವೇ ಎಂಬ ನಿಟ್ಟಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.