ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಯಂತಿ ಗ್ರಾಮದ ಹೊಲವೊಂದರಲ್ಲಿ ಕಟಾವು ಹಂತಕ್ಕೆ ಬಂದಿರುವ ಕಲ್ಲಂಗಡಿ
- ಆರಂಭದಲ್ಲಿ ಕೆಜಿಗೆ ರು.30 ಇದ್ದ ದರ ಈಗ ಕೇವಲ ರು.8
- ಸರ್ಕಾರ ನೀಡಲಿ ಪರಿಹಾರ
ಯಾದಗಿರಿ: ಕಲ್ಲಂಗಡಿ ಬೆಲೆ ದಿಢೀರ್ ಕುಸಿದಿದ್ದು, ಕೈತುಂಬ ಆದಾಯದ ನಿರೀಕ್ಷೆಯೊಂದಿಗೆ ಬೆಳೆದಿದ್ದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜಿಲ್ಲೆಯ ಸುಮಾರು 1000 ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿದೆ. ಜನವರಿ, ಫೆಬ್ರವರಿಯಲ್ಲಿ ಕೆಜಿಗೆ 22&30 ರೂ. ಬೆಲೆಯೊಂದಿಗೆ ವ್ಯಾಪಾರಿಗಳು ಟನ್ಗಟ್ಟಲೆ ಖರೀದಿಸಿದ್ದರಿಂದ ರೈತರು ಆರಂಭದಲ್ಲಿ ಉತ್ತಮ ಲಾಭ ಪಡೆದಿದ್ದರು. ಆದರೆ ಮಾರ್ಚ್ನಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆ ಬೇರೆ ಬೇರೆ ಕಡೆಯ ಕಲ್ಲಂಗಡಿ ಸ್ಥಳಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ದರ ಪಾತಾಳಕ್ಕೆ ಕುಸಿಯುತ್ತ ಸಾಗಿದೆ.
ಸದ್ಯ ವ್ಯಾಪಾರಿಗಳು ಕೆಜಿಗೆ 6&8 ರೂ. ನಿಗದಿಪಡಿಸಿದ್ದರಿಂದ ಕಲ್ಲಂಗಡಿ ಬೆಳೆಗಾರರು ಕಂಗಾಲಾಗಿದ್ದಾರೆ. ಲಾಭದ ಮಾತು ದೂರ, ಖರ್ಚು ಮಾಡಿದಷ್ಟು ಹಣವೂ ಕೈಸೇರದಂಥ ಸನ್ನಿವೇಶ ಸೃಷ್ಟಿಯಾಗಿದೆ.
ನಾಲ್ಕು ಎಕರೆ ಜಮೀನು ಲೀಜ್ ಹಾಕಿಕೊಂಡು ದೊಡ್ಡ ನೇಗಿಲು ಹೊಡೆದು ಉಳುಮೆ, ರುಟವೇಟರ್ ಜತೆ ಬೆಡ್, ಹನಿ ನೀರಾವರಿ ಪದ್ಧತಿ ಮೂಲಕ ಮೆಲ್ಟಿಂಗ್ ಪೇಪರ್ ಹಾಕಿ ಬಾಗಲಕೋಟೆ ನರ್ಸರಿಯಿಂದ 2.20 ಪೈಸೆಗೆ ಒಂದು ಸಸಿಯಂತೆ 24 ಸಾವಿರ ಸಸಿ ತರಿಸಿ ನಾಟಿ ಮಾಡಿರುವ ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದ ನಿಂಗಣ್ಣ ಕರಡಿ ಬೆಲೆಯಲ್ಲಿ ಆದ ಕುಸಿತದಿಂದ ದಿಕ್ಕು ತೋಚದಂತಾಗಿದ್ದಾರೆ.
ಸಾಕಷ್ಟು ಶ್ರಮವಹಿಸಿ ಎಕರೆಗೆ 80 ಸಾವಿರ ರೂ.ಗಳಂತೆ ಮೂರು ಲಕ್ಕೂ ಹೆಚ್ಚು ಖರ್ಚು ಮಾಡಿ ಉತ್ತಮ ಕಲ್ಲಂಗಡಿ ಬೆಳೆದಿದ್ದು, ಹಣ್ಣು ಕಟಾವಿಗೆ ಬಂದಿದೆ. ಇಂಥ ಸ್ಥಿತಿಯಲ್ಲಿ ದಿಢೀರ್ ಬೆಲೆ ಕುಸಿದಿದ್ದು, ವ್ಯಾಪಾರಿಗಳು ಕೆಜಿಗೆ 6&8 ರೂ. ನಿಗದಿಪಡಿಸಿದ್ದಾರೆ. ಬೆಳೆದ ಕಲ್ಲಂಡಗಿ ಮಾರಬೇಕೋ ಇಲ್ಲವೇ ಅದಕ್ಕೆ ಕೊರಳು ಕೊಡಬೇಕೋ ತಿಳಿಯುತ್ತಿಲ್ಲ.
60-70 ದಿನಗಳಲ್ಲಿ ಬೆಳೆಯುವ ಕಲ್ಲಂಗಡಿಗೆ ಆರಂಭದಲ್ಲಿ ಉತ್ತಮ ದರ ಇರುವುದು ಸಹಜ. ನಂತರ ಎಲ್ಲ ಕಡೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಮಾರುಕಟ್ಟೆಗೆ ಬರುವುದರಿಂದ ವ್ಯಾಪಾರಿಗಳು ಬೆಲೆ ಕಮ್ಮಿ ಮಾಡಿ ಖರೀದಿಸುತ್ತಾರೆ. ಪ್ರತಿವರ್ಷ ಹೀಗೆಯೇ. ಇದಕ್ಕಾಗಿ ಸರ್ಕಾರದಿಂದ ಪರಿಹಾರ ಅಂತ ಕೊಡುವ ಯೋಜನೆ ಇಲ್ಲ.
> ರಾವೇಂದ್ರ ಉಕ್ಕಿನಾಳಉಪ ನಿರ್ದೇಶಕ,