ವಿಜಯಪುರ ಸಮೀಪದ ದೊಡ್ಡ ಮುದ್ದೇನಹಳ್ಳಿಯಲ್ಲಿ ಬಿರುಗಾಳಿಗೆ ಮರವೊಂದು ಉರುಳಿ ಬಿದ್ದ ಪರಿಣಾಮ, ಅದರೊಂದಿಗೆ ಸಾಲು ಸಾಲಾಗಿ ಎಂಟು ವಿದ್ಯುತ್ ಕಂಬಗಳು ನೆಲಸಮಗೊಂಡಿವೆ.
ವಿಜಯಪುರ : ಪಟ್ಟಣ ಸಮೀಪದ ದೊಡ್ಡ ಮುದ್ದೇನಹಳ್ಳಿಯಲ್ಲಿ ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ಬೃಹತ್ ಗಾತ್ರದ ಮರದೊಂದಿಗೆ ಸಾಲುಸಾಲಾಗಿ ಎಂಟು ವಿದ್ಯುತ್ ಕಂಬಗಳು ನೆಲಸಮಗೊಂಡಿವೆ. ಇದರಿಂದಾಗಿ 24 ಗಂಟೆಗಳಿಂದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆದರು.
ಸ್ತಬ್ಧಗೊಂಡ ಜನಜೀವನ : ಬೇಸಿಗೆಯ ಬಿಸಿಲಿನಲ್ಲಿ ವಿದ್ಯುತ್ ಇಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಯಲ್ಲಿ ಫ್ಯಾನ್ಗಳಿಲ್ಲದೆ ವೃದ್ದರು ಮತ್ತು ಮಕ್ಕಳು ಉಸಿರುಕಟ್ಟುವ ವಾತಾವರಣದಲ್ಲಿ ಸಮಯ ತಳ್ಳಿದರು. ಮೊಬೈಲ್ ಫೋನ್ ಸೇರಿ ದಿನನಿತ್ಯದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದೆ ಸಂವಹನಕ್ಕೂ ತೊಂದರೆಯಾಗಿದೆ.
ರೈತರ ಆತಂಕ: ವಿದ್ಯುತ್ ಇಲ್ಲದ ಕಾರಣ ಕೃಷಿ ಪಂಪ್ಸೆಟ್ಗಳು ಸ್ಥಗಿತಗೊಂಡಿವೆ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಹರಿಸುವುದು ಅತ್ಯಗತ್ಯವಾಗಿದ್ದು, 24 ಗಂಟೆಗಳಿಂದ ನೀರಿಲ್ಲದೆ ಬೆಳೆಗಳು ಬಾಡುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಹೈನುಗಾರಿಕೆ ನಂಬಿಕೊಂಡಿರುವ ಕುಟುಂಬಗಳೂ ಜಾನುವಾರುಗಳಿಗೆ ನೀರು ಒದಗಿಸಲು ಹರಸಾಹಸ ಪಡುತ್ತಿದ್ದಾರೆ.
ಬಿರುಗಾಳಿಗೆ ಕಂಬಗಳು ಬಿದ್ದ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕತ್ತಲಲ್ಲಿ ರಾತ್ರಿ ಕಳೆಯುವುದು ಸವಾಲಿನ ಕೆಲಸವಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ತುರ್ತಾಗಿ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಬಿದ್ದಿರುವ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಸರಬರಾಜು ಸುಗಮಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.