- ಟರ್ಕಿಯಿಂದ ಬೆಂಗಳೂರಿಗೆ ಬರುತ್ತಿದ್ದ ನಕಲಿ ಲೇಬರ್
- ನಗರದ ನೂರಾರು ಅಂಗಡಿ, ಆಸ್ಪತ್ರೆಗಳಿಗೆ ಔಷಧ ಪೂರೈಕೆ
- ವಿದೇಶಕ್ಕೆ ಕ್ಯಾನ್ಸ್‌ರ್ ಔಷಧ ರವಾನೆ ಮಾಡುತ್ತಿದ್ದ ಆರೋಪಿಗಳು
ಬೆಂಗಳೂರು: ರಾಮನಗರದಲ್ಲಿ ಪತ್ತೆಯಾದ ನಕಲಿ ಔಷಧ ದಂಧೆ ಜಾಲ ಭಾರತ ಅಷ್ಟೇ ಅಲ್ಲದೇ ವಿದೇಶದವರೆಗೂ ವ್ಯಾಪಿಸಿರುವುದನ್ನು ಎಸ್‌ಐಟಿ ಪತ್ತೆ ಮಾಡಿದೆ.
ಔಷಧ ನಿಯಂತ್ರಣ ಇಲಾಖೆ ಹಾಗೂ ವಿಶೇಷ ತನಿಖಾ ತಂಡ ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿರುವ ತನಿಖೆ ವೇಳೆ ಆರೋಪಿಗಳು, ನಕಲಿ ಔಷಧಗಳಿಗೆ ಲೇಬಲ್ಗಳನ್ನು ಟರ್ಕಿ ದೇಶದಿಂದ ಹಡಗು ಮೂಲಕ ಆಮದು ಮಾಡಿಕೊಳ್ಳುತ್ತಿದ್ದರು. ಬಹುರಾಷ್ಟ್ರೀಯ ಕಂಪನಿ ಹಾಗೂ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಲೇಬಲ್ಗಳನ್ನು ಅಂಟಿಸಿ ಔಷಧ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸೆ.11 ರಂದು ಬೆಂಗಳೂರು ಸೇರಿ ದೇಶದ ಆರು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಬೆಂಗಳೂರಿನ ಮಿನರ್ವ ವೃತ್ತದಲ್ಲಿನ ಕೃಪಾ ಹೆಲ್ತ್ ಕೇರ್ ಮೇಲೆ ನಡೆಸಿದ ದಾಳಿ ವೇಳೆ ಅಪಾರ ಪ್ರಮಾಣದ ನಕಲಿ ಔಷಧಗಳು, ನಕಲಿ ಬಿಲ್‌ಗಳು ಪತ್ತೆಯಾಗಿದ್ದವು. ಇದರ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ ಅಧಿಕಾರಿಗಳಿಗೆ ನಕಲಿ ಜಾಲದ ಆಳ-ಅಗಲ ವಿದೇಶದವರೆಗೆ ತಲುಪಿದೆ.
600 ರೂ.ಮೌಲ್ಯದ ವಿವಿಧ ಮಾದರಿಯ ಔಷಧಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ರೂ.ಗೆ ಮಾರಾಟ ವಾಗುತ್ತಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದಿಂದ ಉತ್ತರಾಖಂಡ್, ಮಧ್ಯಪ್ರದೇಶ ಅಷ್ಟೇ ಅಲ್ಲದೇ ಆರೋಪಿಗಳು ವಿದೇಶಕ್ಕೂ ನಕಲಿ ಔರ್ಷದ ರಪ್ತು ಮಾಡಿದ್ದಾರೆ.
ನಗರದಲ್ಲಿ ಕೂಡ ಈ ಜಾಲ ನೂರಕ್ಕೂ ಹೆಚ್ಚು ಔಷಧ ಅಂಗಡಿಗಳು ಹಾಗೂ ಆಸ್ಪತ್ರೆಗಳಿಗೆ ನಕಲಿ ಔಷಧ ಪೂರೈಕೆ ಆಗಿರುವುದು, ನಕಲಿ ಕಂಪನಿ ಮಾಲೀಕ ವಿರೇಶ್ ಕುಮಾರ್ ಅವರನ್ನು ಎಸ್‌ಐಟಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಹಲವು ಸಂಗತಿಗಳು ಹೊರ ಬಿದ್ದಿವೆ.
ಕ್ಯಾನ್ಸರ್ ಔಷಧಗಳನ್ನು ಆರೋಪಿಗಳು ವಿದೇಶಗಳಿಗೆ ಅಕ್ರಮವಾಗಿ ಪೂರೈಕೆ ಮಾಡುತ್ತಿದ್ದರು. ವೀರೇಶ್ ಕುಮಾರ್ ಮೂಲತಃ ರಾಜಸ್ಥಾನದವನಾಗಿದ್ದಾನೆ. ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿ, ಸಂಬಂಧಿಕರೊಬ್ಬರ ಔಷಧ ಮಾರಾಟ ಏಜೆನ್ಸಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರಿದ್ದ. ನಂತರ ಔಷಧ ವ್ಯಾಪಾರದ ಬಗ್ಗೆ ಮಾಹಿತಿ ಪಡೆದು ಕೃಪಾ ಹೆಲ್ತ್ ಕೇರ್ ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದ ಎಂದು ತನಿಖಾ ಮೂಲಗಳು ತಿಳಿಸಿವೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವೀರೇಶ್ ಕುಮಾರ್‌ನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ಮತ್ತೆ ವಿಚಾರಣೆ ನಡೆಸಲು ತನಿಖಾ ತಂಡ ಮುಂದಾಗಿದೆ.