High court 
ರಾಜ್ಯ

ನಕಲಿ ಉದ್ಯೋಗ ದಂಧೆ ಪ್ರಕರಣ ರದ್ದಿಲ್ಲ| High court

ಪ್ರಮುಖ ಮುಖ್ಯಾಂಶಗಳು

  • ತಂದೆ, ಮಗಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್​
  • ಸಿನಿಮೀಯ ಮಾದರಿಯ ವಂಚನೆ ಎಂದು ಅವಲೋಕನ
ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೋಡ್ಡಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ವಂಚಿಸಿದ ಆರೋಪದಲ್ಲಿ ತಂದೆ ಮತ್ತು ಮಗಳ ವಿರುದ್ಧ ಬೆಂಗಳೂರಿನ ಸಿಸಿಬಿ ಪೊಲೀಸ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.
ಎಫ್​ಐಆರ್​ ರದ್ದುಕೋರಿ ಆರೋಪಿಗಳಾದ ಮಡಿಕೇರಿಯ ಶಂಶಾದ್​ ಬೇಗಂ ಮತ್ತು ಆಕೆಯ ತಂದೆ ಎಂ.ಎ. ಮನ್ಸೂರ್​ ಅಹ್ಮದ್​ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇಂದೊಂದು ಸಿನಿಮೀಯ ಮಾದರಿಯ ವಂಚನೆ ಎಂದು ಅಭಿಪ್ರಾಯಪಟ್ಟಿದೆ.
ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 5.30 ಕೋಟಿ ರೂಪಾಯಿ ಹಣವನ್ನು ಹಲವು ಮಂದಿಗೆ ವಂಚಿಸಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ತಮ್ಮನ್ನು ಕಾಂಗ್ರೆಸ್​ ಮುಖಂಡರು ಎಂದು ಬಿಂಬಿಸಿಕೊಂಡಿದ್ದ ಆರೋಪಿಗಳು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು ಎಂದು ಪ್ರಾಸಿಕ್ಯೂಷನ್​ ವಾದಿಸಿತ್ತು.

ಬಾಲಿವುಡ್​ ಚಿತ್ರ ಶೈಲಿ:

ಪ್ರಾಸಿಕ್ಯೂಷನ್​ ಪರ ವಕೀಲರು ವಾದ ಮಂಡಿಸಿ, ಆರೋಪಿಗಳ ಕಾರ್ಯಚರಣೆಯು ಬಾಲಿವುಡ್​ನ ಸ್ಪೇಷಲ್​ 26 ಚಲನಚಿತ್ರದಂತಿತ್ತು ಎಂದು ವಿವರಿಸಿದ್ದರು. ಅಭ್ಯರ್ಥಿಗಳನ್ನು ಕೋಲ್ಕತ್ತ ಹಾಗೂ ಮಹಾರಾಷ್ಟ್ರಕ್ಕೆ ಕರೆಸಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ನಕಲಿ ಉದ್ಯೋಗ ಪತ್ರ ನೀಡಿ ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ನೀಡುವಂತೆ ನಂಬಿಸುತ್ತಿದ್ದರು ಕೆಲ ಸಂತ್ರಸ್ತರು ಅದನ್ನು ನಿಜವೆಂದೇ ನಂಬಿ ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಕೂಡ ಮಾಡಿದ್ದಾರೆ ಎಂದು ತಿಳಿಸಿದ್ದರು.
ಮೊದಲ ಹಂತದಲ್ಲಿ 7 ಜನರಿಂದ 25 ಲಕ್ಷ ರೂ. ಹಾಗೂ ನಂತರದ ಹಂತಗಳಲ್ಲಿ ವಿವಿಧ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಒಟ್ಟು 5.30 ಕೋಟಿ ರೂ. ಹಣ ಪಡೆದಿದ್ದಾರೆ. ಹಣ ಪಡೆದ ನಂತರ ನಕಲಿ ಇಮೇಲ್​ ಐಡಿಗಳನ್ನು ಸೃಷ್ಟಿಸಿ, ಅದರ ಮೂಲಕ ನಕಲಿ ನೇಮಕಾತಿ ಆದೇಶಗಳನ್ನು ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದರು.