- ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ನಕಲಿ ನೋಟು ತಯಾರಿ
- 500 ಮುಖಬೆಲೆಯ 338 ನೋಟು ಪತ್ತೆ
ಬೆಂಗಳೂರು: ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ 500 ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡತ್ತಿದ್ದ ಜಾಲ ಬೇಧಿಸಿರುವ ಕುಂಬಳಗೋಡು ಠಾಣೆ ಪೊಲೀಸರು ಚೆನ್ನೈ ಮೂಲದ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ನಿವಾಸಿ ಕೆ.ಸಿ ಅರವಿಂದ್(47) ಮತ್ತು ಚೆನ್ನೈ ಮೂಲದ ಪಿ.ವೆಂಕಟಸುಬ್ರಹ್ಮಣಿ (41) ಬಂಧಿತರು. ಆರೋಪಿಗಳಿಂದ 3.29 ಲಕ್ಷ ರೂ. ಮೌಲ್ಯದ 500 ಮುಖ ಬೆಲೆಯ 338 ನಕಲಿ ನೋಟುಗಳು, ಜೆರಾಕ್ಸ್ ಯಂತ್ರ, ಲ್ಯಾಪ್‌ಟಾಪ್, ಕಾರು ಹಾಗೂ ಮೂರು ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಸುಮಾರು ಆರೇಳು ತಿಂಗಳಿಂದ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಅರವಿಂದ್ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿಕೊಂಡಿದ್ದಾನೆ. ವೆಂಕಟಸುಬ್ರಹ್ಮಣಿ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಒಂದು ವರ್ಷದ ಹಿಂದೆ ಇಬ್ಬರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆಯೇ ಅಕ್ರಮ ದಂಧೆ ಬಗ್ಗೆ ಸಂಚು ರೂಪಿಸಿದ್ದರು ಎಂಬುದು ಪಲೀಸರ ತನಿಖೆ ವೇಳೆ ಬಯಲಾಗಿದೆ.
ಪಿರಿಯಾಪಟ್ಟಣದ ಆರೋಪಿ ಅರವಿಂದ್ ಕುಂಬಳಗೋಡು ಬಳಿಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆದಾರನಾಗಿ ವಾಸವಾಗಿದ್ದ. ಅಲ್ಲಿಯೇ ಜೆರಾಕ್ಸ್ ಯಂತ್ರ ಹಾಗೂ ಲ್ಯಾಪ್‌ಟಾಪ್ ಮೂಲಕ ನಕಲಿ 500 ರೂ. ಮುಖಬೆಲೆಯ ನೋಟುಗಳನ್ನು ತಯಾರಿಸುತ್ತಿದ್ದ. ನಂತರ ಅವುಗಳನ್ನು ಚೆನ್ನೈನಲ್ಲಿರುವ ಸ್ನೇಹಿತ ವೆಂಕಟಸುಬ್ರಹ್ಮಣ್ಯಗೆ ಕಳುಹಿಸುತ್ತಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅರವಿಂದನನ್ನು ಕೆಂಚನಪುರ ಕ್ರಾಸ್ ಬಳಿ ಕೆಲ ದಿನಗಳ ಹಿಂದೆ ಬಂಧಿಸಿದ್ದರು. ನಂತರ ಈತನ ಮಾಹಿತಿ ಮೇರೆಗೆ ಚೆನ್ನೈನ ಮಾರುತಿನಗರದಲ್ಲಿ ವೆಂಟಕಸುಸುಬ್ರಹ್ಮಣಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇ 70,30ರಂತೆ ಹಣ ಹಂಚಿಕೆ
ಬೆಂಗಳೂರಲ್ಲಿ ಕುಳಿತು ಖೋಟಾ ನೋಟುಗಳನ್ನು ಮುದ್ರಣ ಮಾಡಿ ಚೆನ್ನೈಗೆ ಕಳುಹಿಸುತ್ತಿದ್ದ ಅರವಿಂದ್, ಆರೋಪಿ ವೆಂಕಟಸುಬ್ರಮಣಿ ತನ್ನದೇ ಜಾಲದ ಮೂಲಕ ನಕಲಿ ನೋಟುಗಳನ್ನು ಮಾರಾಟ ಮಾಡುತ್ತಿದ್ದನು. ನೋಟುಗಳು ಚಲಾವಣೆಯಿಂದ ಬಂದು ಹಣವನ್ನು ಶೇ 30ರಷ್ಟು ಅರವಿಂದ್‌ಗೆ ಹಾಗೂ ಶೇ.70ರಷ್ಟು ವೆಂಕಟಸುಬ್ರಹ್ಮಣಿ ಹಂಚಿಕೊಳ್ಳುತ್ತಿದ್ದರು. ನೂರು ರೂಪಾಯಿಗೆ ವಸ್ತುಗಳನ್ನು ಖರೀದಿಸಿ ನಕಲಿ 500 ರೂ. ನೀಡುತ್ತಿದ್ದರು. ಬಂದ ನಾಲ್ಕುನೂರು ಅಸಲಿ ಹಣವನ್ನು ತಮ್ಮಲ್ಲಿ ಇಟ್ಟುಕೊಳ್ಳುತ್ತಿದ್ದರು. ಸುಮಾರು ತಿಂಗಳಿಂದ ಲಕ್ಷಾಂತರ ರೂ. ಹಣವನ್ನು ನಕಲಿಯಾಗಿ ಚಲಾವಣೆ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.