Fake Budubuduke Swamiji Robs Gold Worth Rs 1.2 Lakh
- ಬುಡುಬುಡುಕೆ ವೇಷ ಧರಿಸಿ ದಂಪತಿಗೆ ವಂಚಿಸಿ ಚಿನ್ನಾಭರಣ ಕದ್ದೊಯ್ದ ಬುಡುಬುಡುಕೆಯಾತ.
- ಬೆಂಗಳೂರಿನ ಹೆಗ್ಗಡದೇವನಪುರದಲ್ಲಿ ಬುಡುಬುಡುಕೆ ವೇಷಧಾರಿಯಿಂದ ಮೋಸಹೋದ ದಂಪತಿ.
- ಮನೆಯಲ್ಲಿ ಸಾವಾಗುತ್ತೆ ಎಂದು ನಂಬಿಸಿ, ಪೂಜೆ ಮಾಡಿಸುವ ನೆಪದಲ್ಲಿ ಚಿನ್ನ ಉಡೀಸ್.
Fake Budubuduke Swamiji Robs Gold Worth Rs 1.2 Lakh:
ನಿಮ್ಮ ಮನೆಯಲ್ಲಿ ಸಾವಿನ ಕಂಟಕವಿದೆ ಎಂದು ಹೆದರಿಸಿ, ಬುಡಬುಡಕೆಯರಂತೆ ವೇಷ ಧರಿಸಿದ ವ್ಯಕ್ತಿಯೊಬ್ಬ, ಗರ್ಭಿಣಿ ಮಹಿಳೆಯೊಬ್ಬರಿಗೆ ಲಕ್ಷಕ್ಕೂ ಹೆಚ್ಚು ಬಮೌಲ್ಯದ ಚಿನ್ನಾಭರಣ ಪಂಗನಾಮ ಹಾಕಿದ ಘಟನೆ ಬೆಂಗಳೂರಿನ ಹೆಗ್ಗಡದೇವನಪುರದಲ್ಲಿ ಬೆಳಕಿಗೆ ಬಂದಿದೆ.
ಹೆಗ್ಗಡದೇವನಪುರ ನಿವಾಸಿ ಮೋಹನ್ ಪತ್ನಿ ಉಷಾ ಎಂಬುವವರೇ ಮೋಸ ಹೋದಾಕೆ. ಉಷಾ ಅವರು 8 ತಿಂಗಳ ಗರ್ಭಿಣಿ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಈ ಕಳ್ಳ ಸ್ವಾಮೀಜಿ. ನಿಮ್ಮ ಮನೆಯಲ್ಲಿ ದೋಷವೊಂದು ಕಾಣುತ್ತಿದೆ. ಇಷ್ಟರಲ್ಲೇ ಯಾರೋ ಸಾಯುತ್ತಾರೆ ಎನ್ನುವ ಸೂಚನೆ ಇದೆ ಎಂದು ಹೆದರಿಸಿದ್ದಾನೆ.
ಪೂಜೆ ನೆಪದಲ್ಲಿ ಮೋಸ
ಮೊದಲೇ ಪತ್ನಿ ಗರ್ಭಿಣಿಯಾಗಿದ್ದ ಕಾರಣ ತೀವ್ರ ಭಯಪಟ್ಟು, ಇದಕ್ಕೆ ಪರಿಹಾರವೇನೆಂದು ಕೇಳಿಕೊಂಡಿದ್ದಾರೆ. ಒಂದು ಪೂಜೆ ಮಾಡಬೇಕು. ನನಗೇನು ಹಣ ಬೇಡ ಎಂದು ಆತ ಹೇಳಿ, ಮನೆ ಒಳಗೆ ಪ್ರವೇಶಿಸಿದ್ದಾನೆ. ತನ್ನ ಬಳಿ ಇದ್ದ ಮಡಿಕೆಯೊಂದನ್ನು ಮಧ್ಯ ಇಟ್ಟು ಇದಕ್ಕೆ ನಿಮ್ಮ ಬಳಿ ಇರುವ ಚಿನ್ನದ ಒಡವೆಯನ್ನು ಹಾಕಿ, ಇದರಿಂದ ನಿಮ್ಮ ಸಂಪತ್ತು ವೃದ್ಧಿಯಾಗೋದಲ್ಲದೆ, ದೋಷಕ್ಕೆ ಪರಿಹಾರ ಸಿಗುತ್ತದೆ ಎಂದು ನಂಬಿಸಿದ್ದಾನೆ.
ಚಿನ್ನ ಕೊಟ್ಟು ಕೆಟ್ಟ ದಂಪತಿ
ಖದೀಮ ಹೇಳುತ್ತಿರುವುದೆಲ್ಲ ನಿಜ ಎಂದು ನಂಬಿದ ದಂಪತಿ, ತಮ್ಮ ಬಳಿ ಇದ್ದ ಸರ, ಓಲೆ, ಮಾಟಿ, ಉಂಗುರ ಎಲ್ಲವನ್ನು ಮಡಿಕೆಗೆ ಹಾಕಿದ್ದಾರೆ. ದಂಪತಿಗೆ ನೀರು ತರುವಂತೆ ಹೇಳಿದ ಸಂದರ್ಭದಲ್ಲಿ ಮಡಿಕೆಯನ್ನು ಬದಲಾಯಿಸಿದ್ದಾನೆ. ಖಾಲಿ ಮಡಿಕೆಯನ್ನು ಮನೆಯಲ್ಲಿಟ್ಟು ಮತ್ತೊಂದನ್ನ ತನ್ನ ಜೋಳಿಗೆಯಲ್ಲಿ ಇರಿಸಿದ್ದಾನೆ,.
ಪೂಜಾಕಾರ್ಯ ಪೂರ್ಣಗೊಂಡ ನಂತರ, ಇಬ್ಬರ ಕೈಗೆ ವಸ್ತುವೊಂದನ್ನು ಇಟ್ಟು, ಕೆರೆ ಬಳಿ ಬಿಟ್ಟು ಬನ್ನಿ ಎಂದು ನಿರ್ದೇಶಿಸಿದ್ದಾನೆ. ದಂಪತಿ ಅತ್ತ ಹೋಗುತ್ತಲೇ ಕಳ್ಳ ತನ್ನ ಕೈ ಚಳಕ ತೋರಿಸಿ, ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯ ಚಿನ್ನವನ್ನು ಬಾಚಿಕೊಂಡು ಪರಾರಿಯಾಗಿದ್ದಾನೆ.
ಜುಲೈ16ರಂದು ಬಾಗಲಗುಂಟೆಯಲ್ಲೊಂದು ಕೇಸ್
37 ವರ್ಷದ ಮಹಿಳೆಯೊಬ್ಬರ ಮಗಳ ವೈವಾಹಿಕ ಜೀವನದಲ್ಲಾಗಿರುವ ವಿವಾದವನ್ನು ವಿಶೇಷ ಆಚರಣೆಯ ಮೂಲಕ ಪರಿಹರಿಸುವುದಾಗಿ ಭರವಸೆ ನೀಡಿ ಸ್ವಯಂ ಘೋಷಿತ ಸ್ವಾಮೀಜಿಯೊಬ್ಬರು ತಮ್ಮ ಕುಟುಂಬಕ್ಕೆ 43 ಗ್ರಾಂ ಚಿನ್ನಾಭರಣ ಮತ್ತು ₹1.3 ಲಕ್ಷ ವಂಚಿಸಿದ ಘಟನೆ ಬಾಗಲಗುಂಟೆ ವ್ಯಾಪ್ತಿ ಬೆಳಕಿಗೆ ಬಂದಿತ್ತು. ಶಿವಕಾಳಿ ಅಲಿಯಾಸ್ ನಿತಿನ್ ಎಂಬಾತನೆ ಆರೋಪಿ ಎಂದು ಪೊಲೀಸರು ಗುರುತಿಸಿದ್ದು, ಖದೀಮನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.
ಪೂಜೆ ಮಾಡುವಾಗ ಬೂದಿಯನ್ನು ಹಾಕಿ ಸಂತ್ರಸ್ತೆ ಗೀತ ಎಂಬುವವರು ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಆನಂತರ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದರು,(ಏಜೆನ್ಸೀಸ್).