ಹನೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಸಮಿತಿಯ ತಾಲೂಕು ಅಧ್ಯಕ್ಷ ಪಾಳ್ಯ ರಾಚಯ್ಯ ಅಧ್ಯಕ್ಷೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉಮೇಶ್, ಅಂಬಿಕಾ, ಬಷೀರ್, ಸಿದ್ದಪ್ಪಾಜಿ ಇತರರಿದ್ದರು.
ಹನೂರು: ಕ್ಷೇತ್ರದ ಕೆರೆದಿಂಬ ಹಾಗೂ ಗೊಂಬೆಗಲ್ಲು ಗಿರಿಜನರ ಹಾಡಿಯನ್ನು ಹನೂರು ತಾಲೂಕಿನ ನ್ಯಾಯ ಬೆಲೆ ಅಂಗಡಿಗಳ ಪಟ್ಟಿಗೆ ಸೇರಿಸಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಾಳ್ಯ ರಾಚಯ್ಯ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಮಿತಿ ಸದಸ್ಯರಿಂದ ಮಾಹಿತಿ ಪಡೆದು ಮಾತನಾಡಿದರು.
ಕ್ಷೇತ್ರದ ಕೆರೆದಿಂಬ ಹಾಗೂ ಗೊಂಬೆಗಲ್ಲು ಗಿರಿಜನರ ಹಾಡಿಯು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಆದರೆ ನ್ಯಾಯ ಬೆಲೆ ಅಂಗಡಿಗಳ ಪಟ್ಟಿಯಲ್ಲಿ ಕೊಳ್ಳೇಗಾಲ ತಾಲೂಕಿಗೆ ಸೇರಿದೆ. ಇಲ್ಲಿಂದಲೇ ಪಡಿತರ ವಿತರಣೆಯಾಗುತ್ತಿದ್ದು, ವಿಳಂಬವಾಗುತ್ತಿದೆ. ಕೆಲವರು ಪಡಿತರ ಚೀಟಿ ಪಡೆಯಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಎರಡು ಹಾಡಿಗಳನ್ನು ಹನೂರು ತಾಲೂಕಿಗೆ ಸೇರಿಸಿ ಎಂದು ಈ ಹಿಂದೆಯೇ ತಿಳಿಸಲಾಗಿದೆ. ಆದರೆ ಯಾವುದೇ ಕ್ರಮವಾಗದಿರುವುದು ನಿಜಕ್ಕೂ ವಿಪರ್ಯಾಸ. ಹಾಗಾಗಿ ಈ ಕಾರ್ಯ ತುರ್ತಾಗಿ ಆಗಬೇಕಿದೆ. ಇನ್ನು ನ್ಯಾಯ ಬೆಲೆ ಅಂಗಡಿಯ ಮಾಲೀಕತ್ವವನ್ನು ನಿಗದಿಪಡಿಸಿರುವ ಮೀಸಲಾತಿಯಂತೆ ಆಯಾ ಸಮುದಾಯದ ಜನರಿಗೆ ನೀಡಬೇಕು. ಆದರೆ ರಾಮೇಗೌಡನಹಳ್ಳಿ, ಕೋಣನಕೆರೆ ಹಾಗೂ ಆನೆಹೊಲ ಗ್ರಾಮದಲ್ಲಿ ಈ ಕೆಲಸವಾಗಿಲ್ಲ. ಇದರಿಂದ ಸಮಾಜದಲ್ಲಿ ಹಿಂದುಳಿದವರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಬೇಕಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯ ಮಾದೇವ ಮಾತನಾಡಿ, ತಾಲೂಕಿನಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಜನರಿಂದ ದೂರು ಕೇಳಿ ಬಂದಿದೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆಯನ್ನು ಆಯೋಜಿಸುವಂತೆ ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು. ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಪ್ರತಿಕ್ರಿಯಿಸಿ, ಈ ಸಂಬಂಧ ಉಪ ನಿರ್ದೇಶಕರ ಗಮನಕ್ಕೆ ತಂದು ಸಭೆ ಆಯೋಜಿಸಲು ಕ್ರಮವಹಿಸಲಾಗುವುದು ಎಂದರು.
ಮಂಚಾಪುರ ಗ್ರಾಮದ ಬಡಾವಣೆಯೊಂದರಲ್ಲಿ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕು ಎಂದು ಸದಸ್ಯ ಬಷೀರ್ ಆಹಮದ್ ತಿಳಿಸಿದರು. ದೊಡ್ಡಾಲತ್ತೂರು ಸಮೀಪವಿರುವ ಗ್ರಾಮಗಳಿಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು. ಇದೇ ವೇಳೆ ಗೃಹಲಕ್ಷ್ಮೀ, ಯುವನಿಧಿ ಹಾಗೂ ಶಕ್ತಿ ಯೋಜನೆ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ತಾಪಂ ಇಒ ಉಮೇಶ್, ಸಿಡಿಪಿಒ ಅಂಬಿಕಾ, ಸೆಸ್ಕ್ ಎಇ ರಾಜು, ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ಸಿದ್ದಪ್ಪಾಜಿ, ಗೋವಿಂದ, ನವಾಬ್ ಇತರರು ಇದ್ದರು.