ಬೆಳಗಾವಿ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು. ಪ್ರೀತಿ ಕಾಮಕರ, ಹನುಮಂತ ಕೊಂಗಾಲಿ, ಕಾರ್ತಿಕ್ ಎನ್. ಇತರರಿದ್ದರು. 
ರಾಜ್ಯ

ಮುಚ್ಚದ ರಸ್ತೆ ಗುಂಡಿ ಅನುದಾನ ಅಪವ್ಯಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಪ್ರತಿವರ್ಷ ಕೋಟ್ಯಂತರ ರೂ.ಅನುದಾನ ಖರ್ಚಾಗುತ್ತಿದ್ದರೂ, ರಸ್ತೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ. ಅದೇ ರಸ್ತೆ, ಅದೇ ಗುಂಡಿ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಜನರ ತೆರಿಗೆ ಹಣ ದುರ್ಬಳಕೆಯಾಗುತ್ತಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ, ಕಳಪೆ ರಸ್ತೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಪ್ರತಿ ಬಾರಿ ಅನುದಾನದ ಕೊರತೆ ನೆಪದಲ್ಲಿ ಸಂಪೂರ್ಣ ರಸ್ತೆ ನಿರ್ಮಾಣ ಸಾಧ್ಯವಿಲ್ಲ ಎಂದು ಕಾರಣ ನೀಡಿ ಗುಂಡಿ ಮುಚ್ಚುವ ಕಾರ್ಯ ಮುಂದುವರಿಸಿದ್ದಾರೆ. ಆದರೆ, ರಸ್ತೆಗಳಲ್ಲಿನ ಗುಂಡಿಗಳು ಮಾತ್ರ ಹಾಗೆಯೇ ಇವೆ. ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ದೂರಿದರು.
ಪಾಲಿಕೆ ಆಯುಕ್ತ ಎಂ.ಕಾರ್ತಿಕ್ ಮಾತನಾಡಿ, ಪ್ರತಿ ವರ್ಷ ರಸ್ತೆಗಳ ನಿರ್ವಹಣೆಗಾಗಿ ಪಾಲಿಕೆ ವಾರ್ಷಿಕ ಬಜೆಟ್‌ನಲ್ಲಿ ದಕ್ಷಿಣ ವಲಯಕ್ಕೆ 80 ಲಕ್ಷ ರೂ., ಉತ್ತರ ವಲಯದಕ್ಕೆ 80 ಲಕ್ಷ ರೂ. ಹಾಗೂ ಕೇಂದ್ರ ವಲಯಕ್ಕೆ 90 ಲಕ್ಷ ರೂ. ಸೇರಿದಂತೆ ಒಟ್ಟು 2.50 ಕೋಟಿ ರೂ. ಮೀಸಲಿಡಲಾಗುತ್ತಿದೆ ಎಂದು ವಿವರಿಸಿದರು.
ಮೇಯರ್ ಪ್ರೀತಿ ಕಾಮಕರ್ ಮಾತನಾಡಿ, ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿರುವ ಕುರಿತು ಜಿಪಿಎಸ್ ಪೋಟೋ, ಗುಂಡಿ ಅಗಲ, ಉದ್ದ ಸಮೇತ ದಾಖಲೆಗಳಲ್ಲಿ ಉಲ್ಲೇಖಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ವಾರ್ಡಿನ ಸದಸ್ಯರಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು. ಅಲ್ಲಿಯವರೆಗೆ ಗುತ್ತಿಗೆದಾರರಿಗೆ ಯಾವುದೇ ಬಿಲ್ ಬಿಡುಗಡೆ ಮಾಡಬಾರದು ಎಂದು ಸೂಚಿಸಿದರು.
ಸದಸ್ಯ ರವಿ ಧೋತ್ರೆ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿ ಕೆಎಸ್‌ಡಬ್ಲುಡಿಎಸ್‌ನವರು ವಿಶ್ವ ಬ್ಯಾಂಕ್ ಯೋಜನೆಯಡಿ 4ರಿಂದ 5 ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ. ಈ ಕಾಮಗಾರಿ ಬಿಲ್‌ಗಳಿಗೆ ಮಹಾನಗರ ಪಾಲಿಕೆ ಆಯುಕ್ತರು ಒಪ್ಪಿಗೆ ನೀಡುತ್ತಿದ್ದಾರೆ. ಆದರೆ, ಪಾಲಿಕೆ ಮೇಯರ್, ಉಪಮೇಯರ್ ಅವರಿಂದ ಈ ವಿಷಯ ಗೌಪ್ಯವಾಗಿಟ್ಟಿರುವ ಉದ್ದೇಶವೇನು, ಕೂಡಲೇ ಸಂಬಂಧಿಸಿದ ದಾಖಲೆಗಳನ್ನು ಸಭೆಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಉಪಮೇಯರ್ ಹನುಮಂತ ಕೊಂಗಾಲಿ, ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ, ಉದಕುಮಾರ ತಳವಾರ, ಲಕ್ಷ್ಮೀ ನಿಪ್ಪಾಣಿಕರ ಇತರರಿದ್ದರು.
***

ನಗರದಲ್ಲಿ ಬಿದಿ ನಾಯಿಗಳ ಹಾವಳಿ

ಬೆಳಗಾವಿ ಶ್ರೀನಗರ, ರಾಮತೀರ್ಥನಗರ, ಗಾಂಧಿನಗರ ಸೇರಿ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಜನರು ಓಡಾದಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಲ್ಲಿ ಮಾಳಮಾರುತಿ ಪೊಲೀಸ್ ಠಾಣೆ ಇಬ್ಬರು ಪೊಲೀಸರು, ಶ್ರೀನಗರ, ರಾಮತೀರ್ಥ ನಗರ ಸೇರಿ ವಿವಿಧ ಕಡೆಗಳಲ್ಲಿ 12 ಮಂದಿಗೆ ನಾಯಿ ಕಚ್ಚಿದೆ. ಮತ್ತೊಂದೆಡೆ ಕರಿ ಬಣ್ಣದ ಹುಚ್ಚು ನಾಯಿಯೊಂದು ನಾಯಿಗಳಿಗೆ ಕಚ್ಚಿಕೊಂಡು ಓಡಾಡುತ್ತಿದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯಿಂದ ಲಭಿಸಿದೆ. ನಾಯಿ ಹಿಡಿಯಲು ಗುತ್ತಿಗೆ ಪಡೆದಿರುವ ಸಂಸ್ಥೆಯವರು ಬೀದಿ ನಾಯಿ ಹಿಡಿಯದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ದೂರು ಕೊಟ್ಟ ನಾಲ್ಕು ದಿನಗಳ ಬಳಿಕ ನಾಯಿ ಹುಡುಕಲು ಬರುತ್ತಿದ್ದಾರೆ. ಬೀದಿ ನಾಯಿಗಳ ನಿರ್ವಹಣೆಗಾಗಿ ಪ್ರತಿ ವಾರ್ಡ್‌ನಿಂದ 2 ಲಕ್ಷ ರೂ. ಹಣ ಸಂಗ್ರಹಿಸಲಾಗಿದೆ. ಆದರೆ, ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂದು ಸದಸ್ಯರು ದೂರಿದರು.
ಆರೋಗ್ಯ ಅಧಿಕಾರಿ ಹನುಮಂತ ಕಲಾದಗಿ, ಲಕ್ಷ್ಮೀ ನಿಪ್ಪಾಣಿಕರ ಮಾತನಾಡಿ, ಸದ್ಯ ನಗರದಲ್ಲಿ 35 ಸಾವಿರ ಬೀದಿ ನಾಯಿಗಳಿದ್ದು, ನಿತ್ಯ 8ರಿಂದ 10 ನಾಯಿಗಳನ್ನು ಹಿಡಿಯಲಾಗುತ್ತಿದೆ. ಆದರೆ, ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಸ್ಥಾಪಿಸಲು ಸ್ಥಳದ ಸಮಸ್ಯೆ ಇದೆ. ಶ್ರೀನಗರದಲ್ಲಿರುವ ಕೇಂದ್ರವನ್ನು ಮುಚ್ಚುವಂತೆ ಸ್ಥಳೀಯರು ಒತ್ತಡ ಹಾಕುತ್ತಿದ್ದಾರೆ. ಕೆ.ಕೆ.ಕೊಪ್ಪದಲ್ಲಿ ಕೇಂದ್ರ ಸ್ಥಾಪಿಸಲು ಜನ ವಿರೋಧಿಸುತ್ತಿದ್ದಾರೆ. ಹೀಗಾಗಿ, ಸಮಸ್ಯೆ ಎದುರಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.