- ಪಿಟಿಸಿಎಲ್ ಕಾಯ್ದೆ ಅಡಿ ಜಮೀನು ಮರಳಿಸಿದ್ದ ಸರ್ಕಾರದ ಆದೇಶ ರದ್ದು
- ಸುದೀರ್ಘ ವಿಳಂಬದ ಬಗ್ಗೆ ಹೈಕೋರ್ಟ್ ಆಕ್ಷೇಪ
ಬೆಂಗಳೂರು: ಹಿಂದುಳಿದ ಮತ್ತು ಶೋಷಿತ ವರ್ಗದವರ ರಕ್ಷಣೆಗಾಗಿ ಜಾರಿಗೆ ತಂದಿರುವ ಸಾಮಾಜಿಕ ಕಲ್ಯಾಣದ ಕಾನೂನುಗಳನ್ನು ಇತರರ ಶೋಷಣೆಗಾಗಿ ಬಳಸುವುದಕ್ಕೆ ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಸರ್ಕಾರದಿಂದ ಪಡೆದ ಜಮೀನನ್ನು ಇನ್ನೊಬ್ಬರಿಗೆ ಮಾರಾಟ ಮಾಡಿದ ಸುಮಾರು 40 ವರ್ಷಗಳ ನಂತರ ಮಾರಾಟ ಮಾಡಿದ ಪರಿಶಿಷ್ಟ ಜಾತಿಯ (ಎಸ್ಸಿ) ವ್ಯಕ್ತಿಯ ವಾರಸುದಾರರು ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಚಾಮರಾಜನಗರದ ಮೊಲ್ಲೆ ಚಿಕ್ಕಯ್ಯ ಎಂಬ ಪರಿಶಿಷ್ಟ ಜಾತಿಯ ವ್ತಕ್ತಿಗೆ ರಾಜ್ಯ ಸರ್ಕಾರವು 1967ರಲ್ಲಿ ಜಮೀನು ಮಂಜೂರು ಮಾಡಿತ್ತು. ಆ ಜಮೀನನ್ನು ಅವರು ಅದೇ ವರ್ಷ ಹೈಕೋರ್ಟ್ನಲ್ಲಿ ಅರ್ಜಿದಾರರಾಗಿರುವ ಸುರೇಶ್ ಮೋಹನ್ ಅವರ ತಾಯಿಗೆ ಅಂದಿನ ಮಾರುಕಟ್ಟೆ ಮೌಲ್ಯಕ್ಕೆ ಮಾರಾಟ ಮಾಡಿದ್ದರು. ಈ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗಂಡ ಬಳಿಕವಷ್ಟೇ ರಾಜ್ಯ ಸರ್ಕಾರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಮೀನು ವರ್ಗಾವಣೆ ನಿಷೇಧ ಕಾಯ್ದೆ (ಪಿಟಿಸಿಎಲ್) ಜಾರಿಗೆ ತಂದಿತ್ತು.
ಜಮೀನನ್ನು ಮಾರಾಟ ಮಾಡಿದ 48 ವರ್ಷಗಳ ಮತ್ತು ಕಾಯ್ದೆಯನ್ನು ಜಾರಿಗೆ ತಂದ 28 ವರ್ಷಗಳ ಸುದೀರ್ಘ ವಿಳಂಬದ ಬಳಿಕ ಮೂಲ ಮಂಜೂರುದಾರ ಚಿಕ್ಕಯ್ಯ ಅವರು 2007ರಲ್ಲಿ ಜಮೀನು ಮರಳಿ ಪಡೆಯಲು ಪಿಟಿಸಿಎಲ್ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೊಳ್ಳೇಗಾಲ ಉಪವಿಭಾಗ ಸಹಾಯಕ ಆಯುಕ್ತರು ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಆದೇಶಿಸಿದರು. ಇದನ್ನು ಪ್ರಶ್ನಿಸಿ ಖರೀದಿದಾರರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಚಾಮರಾಜನಗರ ಉಪ ಆಯುಕ್ತರು ಜಮೀನನ್ನು ಚಿಕ್ಕಯ್ಯ ಅವರ ವಾರಸುದಾರರಿಗೆ ಹಸ್ತಾಂತರಿಸಿ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಸರ್ಕಾರದ ವಾದ ತಿರಸ್ಕೃತ:
ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 5ಕ್ಕೆ 2023ರಲ್ಲಿ ತರಲಾದ ತಿದ್ದುಪಡಿಯನ್ನು ಉಲ್ಲೇಖಿಸಿದ್ದ ರಾಜ್ಯ ಸರ್ಕಾರದ ಪರ ವಕೀಲರು, ಕಾಯ್ದೆಯನ್ನು ಜಾರಿಗೊಳಿಸಲು ಯಾವುದೇ ಕಾಲಮಿತಿ ಇಲ್ಲ ಹಾಗೂ ಇದು ಬಾಕಿ ಇರುವ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ವಾದಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ನ ಹಲವು ತೀರ್ಪುಗಳು ಮತ್ತು ಕಾನೂನಿನ ಮಿತಿಗಳನ್ನು ಉಲ್ಲೇಖಿಸಿದ ಹೈಕೋರ್ಟ್, ದಶಕಗಳ ಕಾಲ ಸುಮ್ಮನಿದ್ದು, ಜಮೀನಿನ ಮೌಲ್ಯ ಕೋಟ್ಯಂತರ ರೂಪಾಯಿ ಹೆಚ್ಚಾದ ನಂತರ ಮರುಪಡೆಯಲು ಯತ್ನಿಸುವುದು ಖರೀದಿದಾರರಿಗೆ ಮಾಡುವ ದ್ರೋಹ ಎಂದು ಅಭಿಪ್ರಾಯಪಟ್ಟು ಸರ್ಕಾರದ ವಾದವನ್ನು ತಳ್ಳಿಹಾಕಿತು.
ಸ್ಪಷ್ಟವಾಗಿ ನಮೂದಿಸಲು ನಿರ್ದೇಶನ
ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಮಂಜೂರು ಜಮೀನುಗಳನ್ನು ಇತರರಿಗೆ ನೋಂದಣಿ ಮಾಡಿಕೊಡುವಂತಿಲ್ಲ. ಆದರೆ, ಸರ್ಕಾರಿ ಕಂದಾಯ ದಾಖಲೆಗಳಲ್ಲಿ ವಿವಾದಿತ ಮಂಜೂರು ಜಮೀನು ಹೌದೇ ಅಥವಾ ಅಲ್ಲವೇ ಎಂಬ ಸ್ಪಷ್ಟ ಉಲ್ಲೇಖ ಇರುವುದಿಲ್ಲ ಎಂದು ಸರ್ಕಾರದ ವಕೀಲರು ಒಪ್ಪಿಕೊಂಡಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಅಮಾಯಕ ಖರೀದಿದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತು. ಇನ್ನು ಮುಂದೆ ಕಂದಾಯ ದಾಖಲೆಗಳಲ್ಲಿ ಇಂತಹ ಜಮೀನುಗಳನ್ನು ಪಿಟಿಸಿಎಲ್ ಕಾಯ್ದೆಗೆ ಒಳಪಟ್ಟ ಮಂಜೂರು ಜಮೀನು ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.