ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲಿ ಉಗ್ರಜಾಲ ವಿಸ್ತರಣೆ: ವಿವಿಧೆಡೆ ಉತ್ತರ, ಪೂರ್ವ ಭಾರತದ ಯುವಕರು ಅಡಗಿರುವ ಶಂಕೆ

ಪ್ರಮುಖ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರೆಂಬ ಆರೋಪದಡಿ ಚಿಕ್ಕಬಳ್ಳಾಪುರ ಹಾಗೂ ಹಾಸನದಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಉಗ್ರಜಾಲ ವಿಸ್ತರಿಸಿರುವ ಆತಂಕ ಶುರುವಾಗಿದೆ.

ರವಿ ನಾಯಕ್ ಬೆಂಗಳೂರು

ಪ್ರಮುಖ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರೆಂಬ ಆರೋಪದಡಿ ಚಿಕ್ಕಬಳ್ಳಾಪುರ ಹಾಗೂ ಹಾಸನದಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಉಗ್ರಜಾಲ ವಿಸ್ತರಿಸಿರುವ ಆತಂಕ ಶುರುವಾಗಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಗ್ರರ ಸ್ಲೀಪರ್ ಸೆಲ್​ಗಳಿರುವ ಬಗ್ಗೆ ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.

ಕೇಂದ್ರ ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳು ಬೆಂಗಳೂರಿನಲ್ಲಿ ಗುರುತಿಸಿರುವ 50ಕ್ಕೂ ಹೆಚ್ಚು ಶಂಕಿತ ಸ್ಲೀಪರ್ ಸೆಲ್​ಗಳ ಪೈಕಿ ಹಲವು ಘಟಕಗಳಿಗೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿ ಉತ್ತರ ಮತ್ತು ಪೂರ್ವ ಭಾರತದ ಪ್ರದೇಶಗಳ ಯುವಕರು ಸೇರ್ಪಡೆಯಾಗಿ ಕರ್ನಾಟಕಕ್ಕೆ ಬಂದು ಅಡಗಿರುವ ಶಂಕೆ ಇದೆ. ಈ ಯುವಕರ ಬ್ರೇನ್​ವಾಶ್ ಮಾಡುವ ಉಗ್ರ ಮುಖಂಡರು, ಕೆಲ ತಿಂಗಳು ಬೆಂಗಳೂರಿನಲ್ಲೇ ಇರಿಸಿ, ಬಳಿಕ ದಕ್ಷಿಣ ಕನ್ನಡ, ಕರಾವಳಿ ಪ್ರದೇಶ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸಿ, ಭಯೋತ್ಪಾದಕ ಚಟುವಟಿಕೆಗಳಿಗೆ ಅಗತ್ಯವಾದ ಸಂಪರ್ಕ, ತರಬೇತಿ ಹಾಗೂ ಸಂಘಟನಾ ಜಾಲ ರೂಪಿಸುವ ಕುರಿತು ಟ್ರೇನಿಂಗ್ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿನ ಪ್ರಕರಣಗಳ ತನಿಖೆಯಲ್ಲಿ, 30 ವರ್ಷದೊಳಗಿನ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುವ ಪ್ರಯತ್ನ ನಡೆಯುತ್ತಿರುವುದು ಬಯಲಾಗಿದೆ.

ವಿಶೇಷವಾಗಿ ಸಾಮಾಜಿಕ ಜಾಲತಾಣ, ತಾಂತ್ರಿಕ ಕ್ಷೇತ್ರ ಹಾಗೂ ಎನ್ಕ್ರಿಪ್ಟೆಡ್ ಆಪ್​ಗಳಲ್ಲಿ ಮೆಸೇಜಿಂಗ್ ಸಂವಹನದಲ್ಲಿ ಪರಿಣತಿ ಹೊಂದಿರುವ ಯುವಕರನ್ನು ಗುರುತಿಸಿ ಅವರನ್ನು ಭಯೋತ್ಪಾದನೆಗೆ ಕರೆತರಲಾಗುತ್ತಿದೆ. ಚಿಕ್ಕಬಳ್ಳಾಪುರ, ಹಾಸನದಲ್ಲಿ ಮೂವರು ಶಂಕಿತರ ಬಂಧನದ ಪ್ರಕರಣದಲ್ಲಿಯೂ ಟೆಲಿಗ್ರಾಂ ಗುಂಪುಗಳ ಮೂಲಕ ಉಗ್ರ ಚಟುವಟಿಕೆ, ನೇಮಕಾತಿ ಹಾಗೂ ಹಣ ಸಂಗ್ರಹಕ್ಕೆ ಸಂಬಂಧಿಸಿದ ಚರ್ಚೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬಂಧಿತರಲ್ಲಿ ಒಬ್ಬ ಉತ್ತರ ಭಾರತ ಮೂಲದವನು ಎಂಬ ವಿಚಾರ ಗೊತ್ತಾಗಿದೆ. ಈವರೆಗೆ ಬಂಧಿತ ಶಂಕಿತರೆಲ್ಲ ಲಷ್ಕರ್-ಎ ತೊಯ್ಬಾ, ಐಸಿಸ್, ಜೈಶ್-ಎ- ಮೊಹಮ್ಮದ್ ಸಂಘಟನೆ ಸದಸ್ಯರೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಉಗ್ರವಾದದ ಪ್ರಚಾರ, ಯುವಕರ ಮನಪರಿವರ್ತಿಸಿ ನೇಮಕಾತಿ, ಭಯೋತ್ಪಾದಕ ಕೃತ್ಯಕ್ಕೆ ಸಂಚು ಸೇರಿ ಇನ್ನಿತರ ಉಗ್ರ ಚಟುವಟಿಗಳ ಕುರಿತು ರಹಸ್ಯ ಮಾತುಕತೆಗೆ ‘ಎನ್ಕ್ರಿಪ್ಟೆಡ್’ ಆಪ್​ಗಳನ್ನು ಬಳಸುತ್ತಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎಂಡ್ ಟು ಎಂಡ್ ಎನ್ಕ್ರಿಪ್ಶನ್ (ಇ2ಇಇ) ವ್ಯವಸ್ಥೆಯಿಂದಾಗಿ ಸಂದೇಶವನ್ನು ಕಳುಹಿಸಿದವರು ಹಾಗೂ ಸ್ವೀಕರಿಸುವವರಷ್ಟೇ ಅದನ್ನು ಓದಲು ಅಥವಾ ನೋಡಲು ಅವಕಾಶವಿರುವುದರಿಂದ ಪತ್ತೆಹಚ್ಚುವುದು ತನಿಖಾಧಿಕಾರಿಗಳಿಗೂ ಕಷ್ಟ.

ಬೆಂಗಳೂರು ನಗರ; ಸಂಪರ್ಕ ಕೇಂದ್ರ

ತನಿಖಾ ಸಂಸ್ಥೆಗಳ ಅನುಮಾನದ ಪ್ರಕಾರ ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಗಳ ಮೂಲಕ ಹೊರರಾಜ್ಯಗಳಿಂದ ಬರುವ ಯುವಕರಿಗೆ ವಸತಿ, ಉದ್ಯೋಗದ ನೆಪ, ಸ್ಥಳೀಯ ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಲ್ಲಿ ಸಾಫ್ಟ್​ವೇರ್ ಹಾಗೂ ತಾಂತ್ರಿಕ ಉದ್ಯೋಗಕ್ಕೆ ಬರುವ ಯುವಕರನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಬಗ್ಗೆ ತನಿಖೆಯಲ್ಲಿ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ಶಮಾ ಪರ್ವೀನ್ ಪ್ರಕರಣದಲ್ಲಿಯೂ ಸಾಮಾಜಿಕ ಜಾಲತಾಣದ ಮೂಲಕ ಅಲ್​ಖೈದಾ ಪರ ಪ್ರಚಾರ ಮತ್ತು ಸಂಪರ್ಕ ನಡೆಸಿದ ಆರೋಪ ತನಿಖೆಯಲ್ಲಿ ಬಹಿರಂಗವಾಗಿತ್ತು. ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಿತ್ತು.

ಅನುಮಾನಗಳೇನು?

  • ಶಂಕಿತ ಉಗ್ರರಿಗೆ ಬೆಂಗಳೂರು ನಗರವೇ ಪ್ರಮುಖ ಕೇಂದ್ರ

  • 50ಕ್ಕೂ ಹೆಚ್ಚು ಸ್ಲೀಪರ್ ಸೆಲ್​ಗಳು ಅಸ್ತಿತ್ವದಲ್ಲಿರುವ ಶಂಕೆ

  • ಯುವಕರ ಸೆಳೆದು ಕರಾವಳಿ, ಉ.ಕರ್ನಾಟಕಕ್ಕೆ ಸ್ಥಳಾಂತರ

  • ಉಗ್ರರ ಜತೆ ಸಂಪರ್ಕ, ವಿವಿಧ ರೀತಿ ಸಂಘಟನಾ ತರಬೇತಿ

  • ಆಮಿಷವೊಡ್ಡಿ 30 ವರ್ಷದೊಳಗಿನ ಯುವಕರ ಸೇರ್ಪಡೆ

ಹೊರರಾಜ್ಯದವರ ಮೇಲೆ ನಿಗಾ

ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ದೀರ್ಘಕಾಲ ನೆಲೆಸುವ ಯುವಕರು, ಪದೇಪದೆ ವಾಸಸ್ಥಳ ಬದಲಾಯಿಸುವವರು, ನಕಲಿ ದಾಖಲೆಗಳಲ್ಲಿ ಕೊಠಡಿ ಅಥವಾ ಮನೆ ಬಾಡಿಗೆ ಪಡೆಯುವವರು, ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನಾಸ್ಪದ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವವರ ಚಟುವಟಿಕೆಗಳ ಮೇಲೆ ತನಿಖಾ ಸಂಸ್ಥೆಗಳು ನಿಗಾ ಇರಿಸಿವೆ.

14 ರಾಜ್ಯಗಳಲ್ಲಿ 253 ಶಂಕಿತರ ಸೆರೆ

ಕೇಂದ್ರ ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ ಶಹಜಾದ್ ಭಟ್ಟಿ ನೆಟ್​ವರ್ಕ್​ಗೆ ಸಂಬಂಧಿಸಿದ ಕಾರ್ಯಾಚರಣೆಯಲ್ಲಿ 14 ರಾಜ್ಯಗಳಲ್ಲಿ 253 ಮಂದಿಯನ್ನು ಬಂಧಿಸ ಲಾಗಿತ್ತು. ಆ ಪಟ್ಟಿಯಲ್ಲಿ ಕರ್ನಾಟಕವೂ ಇದೆ.