ಕೊನೆಗೂ 8 ಅಬಕಾರಿ ನಿರೀಕ್ಷಕರಿಗೆ ಹುದ್ದೆ 
ರಾಜ್ಯ

ಕೊನೆಗೂ 8 ಅಬಕಾರಿ ನಿರೀಕ್ಷಕರಿಗೆ ಹುದ್ದೆ:ಸುಪ್ರೀಂ ತೀರ್ಪು ಹಿನ್ನೆಲೆ ಅಬಕಾರಿ ಇಲಾಖೆ ಆದೇಶ- Finally, 8 Excise Inspectors get posts

ಬೆಂಗಳೂರು: ನ್ಯಾಯಾಂಗ ವ್ಯಾಜ್ಯದ ಹಿನ್ನೆಲೆ ಕಳೆದ ವರ್ಷ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ವರ್ಗಾವಣೆಯಾಗಿ ಹುದ್ದೆ ಮತ್ತು ವೇತನ ಸಿಗದೆ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದ ಗ್ರೂಪ್ ‘ಸಿ’ ವೃಂದದ 8 ಅಬಕಾರಿ ನಿರೀಕ್ಷಕರಿಗೆ ಕೊನೆಗೆ ಹುದ್ದೆ ಸಿಕ್ಕಿದೆ.
2025ರ ಜು.24ರಂದು ಅಬಕಾರಿ ನಿರೀಕ್ಷಕರುಗಳು ಕೌನ್ಸೆಲಿಂಗ್‌ನಲ್ಲಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆಗೊಳಿಸಿ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಕೆಲವು ಅಬಕಾರಿ ನಿರೀಕ್ಷಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಬಳಿಕ, ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲ ಕೇಸ್‌ಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಇಲಾಖೆ ವರ್ಗಾವಣೆ ನಿಯಮನುಸಾರ ಪ್ರಸ್ತುತ ಸ್ಥಳದಲ್ಲಿ ಕನಿಷ್ಠ ಸೇವಾವಧಿ 3 ವರ್ಷ ಪೂರೈಸದೇ ವರ್ಗಾವಣೆಗೊಳಿಸುವಂತಿಲ್ಲ ಹಾಗೂ ನಿಯಮ 6ರಡಿ ವರ್ಗಾವಣೆಗೆ ಕನಿಷ್ಠ 3 ವರ್ಷಗಳ ಸೇವಾವಧಿ ಪೂರೈಸಿರಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಮಾನ್ಯ ಮಾಡಿ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿದ್ದ ಇಲಾಖೆ, ಸುಪ್ರೀಂಕೋರ್ಟ್‌ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್(ಎಸ್‌ಎಲ್‌ಪಿ) ಸಲ್ಲಿಸಿತ್ತು. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಅಧಿಕಾರಿಗಳು ಬಿಡುಗಡೆಯಾಗಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು. ಹುದ್ದೆ ಸಿಗದೆ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದ ಅಬಕಾರಿ ನಿರೀಕ್ಷಕರಾದ ಪ್ರವೀಣ್ ರಂಗಸುಭೆ, ಎಸ್.ಶೀಲಾ, ರೇಖಾ ಮಲ್ಲಪ್ಪ ಕೊಡಕೇರಿ, ಹೇಮಲತಾ, ಬಿ.ಆರ್. ಶ್ರೀನಾಥ್, ಕೇದಾರಿ ಬಸಪ್ಪ ಮುಧೋಳ್, ಎಚ್.ಆರ್.ಸತ್ಯಪ್ರಕಾಶ್ ಮತ್ತು ಶಂಕರ್ ಗುಡದಾರ್‌ಗೆ ಹುದ್ದೆ ನೀಡಿ ಇಲಾಖೆ ಆದೇಶ ಹೊರಡಿಸಿದೆ.