ಕರ್ನಾಟಕ ಕೇಂದ್ರೀಯ ವಿವಿ ಗ್ರಂಥಾಲಯ ವಿಭಾಗದಲ್ಲಿ ಇತ್ತೀಚೆಗೆ ನಡೆದ ಇ&ಸಂಪನ್ಮೂಲ ಬಳಕೆದಾರರ ಜಾಗೃತಿ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಪಾಂಡುರಂಗ ವಿ, ಡಾ.ಪಿ.ಎಸ್.ಕಟ್ಟಿಮನಿ ಇತರರಿದ್ದರು.
- ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
- ಕರ್ನಾಟಕ ಕೇಂದ್ರೀಯ ವಿವಿ ಗ್ರಂಥಾಲಯದಲ್ಲಿ ಕಾರ್ಯಾಗಾರ
ಕಲಬುರಗಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಧ್ಯಾಪಕರು ಜವಾಬ್ದಾರಿಯುತವಾಗಿ ಬಳಸಬೇಕೆ ಹೊರತು, ಶೈಕ್ಷಣಿಕ ಬರವಣಿಗೆ ಹಾಗೂ ಸಂಶೋಧನೆಗಾಗಿ ಎಐ ಮೇಲೆ ಅತಿಯಾದ ಅವಲಂಬನೆ ಹೊಂದಬಾರದು ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಎಸ್.ಆರ್.ರಂಗನಾಥನ್ ಸೆಮಿನಾರ್ ಹಾಲ್ನಲ್ಲಿ ಕೇಂದ್ರ ಗ್ರಂಥಾಲಯದಿಂದ ಬೋಧನಾ ಸಿಬ್ಬಂದಿಗಾಗಿ ಸೋಮವಾರ ಆಯೋಜಿಸಿದ್ದ ಗ್ರಂಥಾಲಯ ಇ&ಸಂಪನ್ಮೂಲಗಳು ಬಳಕೆದಾರರ ಜಾಗೃತಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಶಿಕ್ಷಕರು ಎಐ ಪರಿಕರ ಅವಲಂಬಿಸುವ ಬದಲು, ಗ್ರಂಥಾಲಯ, ಓದುವಿಕೆ ಹಾಗೂ ಮೂಲ ಸಂಶೋಧನೆಯ ಮೂಲಕ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಎಐ ಮೇಲಿನ ಅತಿಯಾದ ಅವಲಂಬನೆಯು ಸ್ವತಂತ್ರ ಚಿಂತನೆಗೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ನಮ್ಮ ಸ್ವಂತಿಕೆ ಕುಗ್ಗಿಸುವ ಸಾಧ್ಯತೆಯಿದೆ. ಶಿಕ್ಷಕರ ಜ್ಞಾನ, ಸೃಜನಶೀಲತೆ ಮತ್ತು ಶೈಕ್ಷಣಿಕ ಪ್ರಾಮಾಣಿಕತೆಯೇ ಗುಣಮಟ್ಟದ ಶಿಕ್ಷಣಕ್ಕೆ ನಿಜವಾದ ಅಡಿಪಾಯ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ, ಸಿಯುಕೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಪಾಂಡುರಂಗ ವಿ. ಮಾತನಾಡಿ, ಆಧುನಿಕ ಡಿಜಿಟಲ್ ಸಂಪನ್ಮೂಲಗಳ ಲಭ್ಯತೆಯಿಂದ ಸಂಶೋಧನಾ ಕಾರ್ಯ ಹಿಂದೆಂದಿಗಿಂತಲೂ ಸುಲಭವಾಗಿದೆ. ಅಧ್ಯಾಪಕರು ಮತ್ತು ಸಂಶೋಧಕರಿಗೆ ಸಾವಿರಾರು ಗುಣಮಟ್ಟದ ಸಂಶೋಧನಾ ರ್ಜನಲ್ಗಳು ಈಗ ಸುಲಭವಾಗಿ ಲಭ್ಯವಾಗುತ್ತಿವೆ. ವಿಶ್ವವಿದ್ಯಾಲಯದ ಸುಸಜ್ಜಿತ ಕೇಂದ್ರ ಗ್ರಂಥಾಲಯ ಹಾಗೂ ಅದರ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಗ್ರಂಥಪಾಲಕ ಡಾ.ಪಿ.ಎಸ್.ಕಟ್ಟಿಮನಿ ಮಾತನಾಡಿ, ಸಂಪೂರ್ಣ ಸ್ವಯಂಚಾಲಿತ ಗ್ರಂಥಾಲಯ ವ್ಯವಸ್ಥೆ ಹೊಂದಿದ್ದು, ಇ&ರ್ಜನಲ್, ಆನ್ಲೈನ್ ಡೇಟಾಬೇಸ್, ಕೃತಿಚೌರ್ಯ ಪತ್ತೆದಾರಿಕೆ ತಂತ್ರಾಂಶ, ವ್ಯಾಕರಣ ಪರಿಷ್ಕರಣೆ ತಂತ್ರಾಂಶ ಸೇರಿ ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ಬೋಧನೆ, ಕಲಿಕೆ ಮತ್ತು ಸಂಶೋಧನೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಗ್ರಂಥಾಲಯದ ಅಧಿಕಾರಿ ಮತ್ತು ಸಿಬ್ಬಂದಿ ಡಾ.ಸತೀಶ್ ತೋಟರ್, ಡಾ.ಜಿ.ಜೆ.ಪಿ.ದೀತ್ ಹಾಗೂ ಗ್ರಂಥಾಲಯ ಸಿಬ್ಬಂದಿ ರಾಜ್ಕುಮಾರ್ ಕಲ್ಯಾಣಿ, ರಾಜೇಶ್ ದಾಸ್, ಬಸವರಾಜ್ ಯಾದವಾಡ, ನಿಂಗಣ್ಣ ಎಂ. ಜಿ, ಪ್ರಕಾಶ ಎಸ್.ಎನ್, ಸಾಗರ್ ಕಬಾಡೆ, ಸತೀಶ್ ಕುಮಾರ್, ಶಿವಕುಮಾರ್ ಇತರರಿದ್ದರು. ಪ್ರಕಾಶ ಎಸ್.ಎನ್.ನಿರೂಪಣೆ ಮಾಡಿದರು.
"
ವಿಶ್ವವಿದ್ಯಾಲಯವು ವೈಜ್ಞಾನಿಕ ಉಪಕರಣ ಹಾಗೂ ಸಂಶೋಧನಾ ಸೌಲಭ್ಯ ಹೊಂದಿದೆ. ಸಮರ್ಪಕ ಬಳಸಿಕೊಳ್ಳುವುದು ಅಧ್ಯಾಪಕರು ಮತ್ತು ಸಂಶೋಧಕರ ಜವಾಬ್ದಾರಿ. ಸಂಶೋಧನೆಯಲ್ಲಿ ಕೃತಿಚೌರ್ಯ ತಪ್ಪಿಸಿ, ಸ್ವಂತ ಸಂಶೋಧನಾ ಬರವಣಿಗೆಯ ಶೈಲಿ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಮೂಲ ಸಂಶೋಧನೆ ಕೈಗೊಳ್ಳಬೇಕು.
— > ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ