High court 
ರಾಜ್ಯ

ಪೊಲೀಸ್​ ವರ್ಗಾವಣೆಗೆ ಘಟನೋತ್ತರ ಅನುಮೋದನೆ| ಎಸ್ಟಾಬ್ಲಿಷ್ಮೆಂಟ್​ ಬೋರ್ಡ್​ಗೆ ಅಧಿಕಾರ| High court

ಬೆಂಗಳೂರು: ಪೂರ್ವಾನುಮತಿ ಇಲ್ಲದೆ ಮಾಡಿದ ವರ್ಗಾವಣೆಗಳಿಗೆ,ಘಟನೋತ್ತರ ಅನುಮೋದನೆ (ಪೋಸ್ಟ್​ ಫ್ಯಾಕ್ಟೋ ಅಪ್ರೂವಲ್​) ನೀಡುವ ಅಧಿಕಾರವು ಪೊಲೀಸ್​ ಎಸ್ಟಾಬ್ಲಿಷ್ಮೆಂಟ್​ ಬೋರ್ಡ್​ಗಿದೆ. ಆದ್ದರಿಂದ, ಬೋರ್ಡ್​ನ ಅನುಮೋದನೆ ಇಲ್ಲದೆ ಮಾಡುವ ವರ್ಗಾವಣೆ ಆದೇಶಗಳ ಆರಂಭಿಕ ಕಾರ್ಯವಿಧಾನ ಲೋಪವನ್ನು ನಂತರ ಸರಿಪಡಿಸಿಕೊಳ್ಳಬಹುದು ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ತಮ್ಮ ವರ್ಗಾವಣೆ ಆದೇಶವನ್ನು ರದ್ದುಪಡಿಸಿದ್ದ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್​ಎಟಿ) ಆದೇಶ ಪ್ರಶ್ನಿಸಿ ನಗರದ ಬ್ಯಾಡರಹಳ್ಳಿ ಪೊಲೀಸ್​ ಠಾಣೆಯ ಎಸ್​ಐ ಬಿ. ಗೋವಿಂದರಾಜು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್​ ಮತ್ತು ಎಚ್​. ಶಾಂತಿಭೂಷಣ್​ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಘಟನೋತ್ತರ ಅನುಮೋದನೆ ಸಿಕ್ಕರೆ ಪ್ರತಿಯೊಂದು ವರ್ಗಾವಣೆಯೂ ಸ್ವಯಂಚಾಲಿತವಾಗಿ ಮಾನ್ಯವಾಗುತ್ತದೆ ಎಂಬ ನಿಯಮ ರೂಪಿಸಲಾಗದು. ಆದರೆ, ಪೊಲೀಸ್​ ಕಾಯ್ದೆಯಲ್ಲಿ ಘಟನೋತ್ತರ ಅನುಮೋದನೆ ನೀಡುವ ಅಧಿಕಾರವನ್ನು ಎಸ್ಟಾಬ್ಲಿಷ್ಮೆಂಟ್​ ಬೋರ್ಡ್​ಗೆ ನೀಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಬೋರ್ಡ್​ಗೆ ಇರುವುದರಿಂದ ಟನೋತ್ತರ ಅನುಮೋದನೆ ಮಾನ್ಯವಾಗಿದೆ ಎಂದು ಆದೇಶಿಸಿದೆ.

ಏನಿದು ವಿವಾದ?:

ಬೆಂಗಳೂರಿನ ಸಿಐಡಿಯಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ ಆಗಿದ್ದ ಸಿ. ಭಾಸ್ಕರ್​ ಅವರನ್ನು ಬ್ಯಾಡರಹಳ್ಳಿ ಪೊಲೀಸ್​ ಠಾಣೆಗೆ ವರ್ಗಾಯಿಸಿ ಮತ್ತು ಪುಲಿಕೇಶಿನಗರ ಠಾಣೆಯಲ್ಲಿದ್ದ ಗೋವಿಂದರಾಜು ಅವರನ್ನು ವಿಧಾನಸೌಧ ಭದ್ರತಾ ವಿಭಾಗಕ್ಕೆ ವರ್ಗಾಯಿಸಿ ಮೇ 10ರಂದು ಸರ್ಕಾರ ಆದೇಶಿಸಿತ್ತು. ಭಾಸ್ಕರ್​ ಅವರು ಮೇ 11ರಂದು ಬ್ಯಾಡರಹಳ್ಳಿ ಠಾಣೆಗೆ ಹಾಜರಾಗಿ ಕರ್ತವ್ಯ ಸ್ವೀಕರಿಸಿದ್ದರು. 
ಆದರೆ, ಮೇ 14ರಂದು ತಿದ್ದುಪಡಿ ಆದೇಶ ಹೊರಡಿಸಿ ಭಾಸ್ಕರ್​ ಅವರನ್ನು ಬ್ಯಾಡರಹಳ್ಳಿ ಠಾಣೆಯಿಂದ ಲೋಕಾಯುಕ್ತ ಠಾಣೆಗೆ ವರ್ಗಾಯಿಸಿ, ಗೋವಿಂದರಾಜು ಅವರನ್ನು ಬ್ಯಾಡರಹಳ್ಳಿ ಠಾಣೆಗೆ ನಿಯೋಜಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಭಾಸ್ಕರ್​ ಅವರು ಕೆಎಸ್​ಎಟಿ ಮೆಟ್ಟಿಲೇರಿದ್ದರು. ವರ್ಗಾವಣೆಯಾಗಿ ಒಂದು ವರ್ಷವಾಗುವ ಮೊದಲು ಮತ್ತು ಪೊಲೀಸ್​ ಎಸ್ಟಾಬ್ಲಿಷ್ಮೆಂಟ್​ ಬೋರ್ಡ್​ನ ಅನುಮೋದನೆಯಿಲ್ಲದೆ ವರ್ಗಾವಣೆ ಮಾಡಲಾಗಿದೆ ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿದ್ದ ಕೆಎಸ್​ಎಟಿ ವರ್ಗಾವಣೆ ರದ್ದುಪಡಿಸಿತ್ತು. 

1 ವರ್ಷದ ನಿಯಮ ಕಡ್ಡಾಯವಲ್ಲ:

ನಿಯಮಗಳ ಪ್ರಕಾರ ಪೊಲೀಸ್​ ಅಧಿಕಾರಿಗಳಿಗೆ ಸಾಮಾನ್ಯವಾಗಿ ಒಂದು ಸ್ಥಳದಲ್ಲಿ ಒಂದು ವರ್ಷದ ಸೇವಾವಧಿ ನಿಗದಿಪಡಿಸಲಾಗಿದೆ. ಆದರೆ, ಆಡಳಿತಾತ್ಮಕ ತುರ್ತುಪರಿಸ್ಥಿತಿಗಳು ಮತ್ತು ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಅವಧಿಪೂರ್ವವಾಗಿ ವರ್ಗಾವಣೆ ಮಾಡಲೂ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಠಾಣೆಯಲ್ಲಿ ಸೇವೆಗೆ ವರದಿ ಮಾಡಿಕೊಂಡ ಮಾತ್ರಕ್ಕೆ ಮುಂದಿನ ಒಂದು ವರ್ಷ ಅಲ್ಲಿಯೇ ಮುಂದುವರಿಯುವ ಹಕ್ಕು ಅಭಾಧಿತವಲ್ಲ. ಈ ಪ್ರಕರಣದಲ್ಲಿ ಹೊರಡಿಸಿದ್ದ ತಿದ್ದುಪಡಿ ವರ್ಗಾವಣೆ ಆದೇಶಕ್ಕೆ ಎಸ್ಟಾಬ್ಲಿಷ್ಮೆಂಟ್​ ಬೋರ್ಡ್​ ಘಟನೋತ್ತರ ಅನುಮೋದನೆ ನೀಡಿರುವುದರಿಂದ ವರ್ಗಾವಣೆಯು ಸಿಂಧುವಾಗಿದೆ ಎಂದಿರುವ ಹೈಕೋರ್ಟ್​, ಕೆಎಸ್​ಎಟಿ ಆದೇಶವನ್ನು ರದ್ದುಪಡಿಸಿದೆ. 

ನ್ಯಾಯಾಂಗ ಹಸ್ತಕ್ಷೇಪಕ್ಕೆ ಮಿತಿ

ವರ್ಗಾವಣೆಗಳು ಸರ್ಕಾರಿ ಸೇವೆಯ ಭಾಗವಾಗಿದೆ. ವರ್ಗಾವಣೆ ಆದೇಶವು ನಿಯಮಬಾಹಿರವಾಗಿದ್ದು, ಸೂಕ್ತವಲ್ಲದ ಪ್ರಾಧಿಕಾರಗಳಿಂದ ಬಂದಿದ್ದರೆ ಅಥವಾ ದುರುದ್ದೇಶದಿಂದ ಮಾಡಲಾಗಿದೆ ಎಂಬ ಅಂಶಗಳು ಕಂಡುಬಂದರೆ ಮಾತ್ರ ನ್ಯಾಯಾಂಗ ಹಸ್ತಕ್ಷೇಪ ಮಾಡಬೇಕು. ಪೊಲೀಸ್​ ಸಿಬ್ಬಂದಿ ವರ್ಗಾವಣೆ ಮತ್ತು ನಿಯೋಜನೆ ಆಡಳಿತಾತ್ಮಕ ವಿಚಾರವಾಗಿದ್ದು, ಅಧಿಕಾರಿಗಳ ನಿರ್ಧಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್​ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.