Ex Minister Venkataramanappa (ಚಿತ್ರ X)
ತುಮಕೂರು: ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರದ ಹಿರಿಯ ರಾಜಕಾರಣಿ, ಮಾಜಿ ಸಚಿವ (Ex Minister Venkataramanappa) ವೆಂಕಟರಮಣಪ್ಪ (80) ಇಂದು (ಮೇ 29) ನಿಧನರಾಗಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳಿದಿದ್ದಾರೆ.
ಮಾಜಿ ಸಚಿವ ವೆಂಕಟರಮಣಪ್ಪ ಅವರ ರಾಜಕೀಯ ನಡೆ
ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಅವರ ರಾಜಕೀಯ ಸಫಲತೆ ಮತ್ತು ಏರಿಳಿತಗಳ ಇತಿಹಾಸ ರೋಚಕವಾದುದು. ಮೂಲತಃ ಗುತ್ತಿಗೆದಾರರಾಗಿದ್ದ ಅವರು, 1984 ರಲ್ಲಿ ಮಂಡಲ ಪಂಚಾಯತಿ ಸದಸ್ಯರಾಗುವ ಮೂಲಕ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದರು.
ಇದಾದ ಬಳಿಕ 1989 ರಲ್ಲಿ ಪಾವಗಡ ಎಸ್‌ಸಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1994 ರ ಚುನಾವಣೆಯಲ್ಲಿ ಸೋಲು ಕಂಡಿದ್ದರೂ 1999 ರಲ್ಲಿ ಪುನಃ ಕಾಂಗ್ರೆಸ್‌ನಿಂದ ಮರು ಆಯ್ಕೆಯಾದರು. 2004 ರ ಚುನಾವಣೆಯಲ್ಲಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿದರು.
ಆದರೆ, 2008 ರ ಚುನಾವಣೆ ಅವರ ರಾಜಕೀಯ ಜೀವನವು ತಿರುವುಪಡೆದುಕೊಂಡಿತು. ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ಪಕ್ಷೇತರ ಪಕ್ಷದಲ್ಲಿ ನಿಂತು ಗೆದ್ದ ಅವರು ದಕ್ಷಿಣ ಭಾರತದ ಮೊಟ್ಟಮೊದಲ ಬಿಜೆಪಿ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸಿ, ಸಣ್ಣ ನೀರಾವರಿ ಸಚಿವರಾದರು.
2013 ರಲ್ಲಿ ಇವರ ಬದಲಿಗೆ ಪುತ್ರ ಎಚ್.ವಿ. ವೆಂಕಟೇಶ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಹೀಗಾಗಿ, 2018 ರಲ್ಲಿ ಮತ್ತೆ ಅಖಾಡಕ್ಕಿಳಿದ ವೆಂಕಟರಮಣಪ್ಪ ಭರ್ಜರಿ ಗೆಲುವು ಸಾಧಿಸಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದರು. ಪ್ರಸ್ತುತ ಇವರ ಪುತ್ರ ಎಚ್.ವಿ. ವೆಂಕಟೇಶ್ ಅವರು ಪಾವಗಡ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾಗಿ ತಂದೆಯ ರಾಜಕೀಯ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ (ಏಜೆನ್ಸೀಸ್).