ಕಲಬುರಗಿ ಸರ್ವ ಪಿಯು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಎಐ& ಸಮಸ್ಯೆ ಪರಿಹರಿಸುವ ಸವಾಲು ಕುರಿತ ವಿಶೇಷ ಕಾರ್ಯಾಗಾರವನ್ನು ಪ್ರೊ.ಚನ್ನಾರಡ್ಡಿ ಪಾಟೀಲ್​ ಉದ್ಘಾಟಿಸಿದರು. ಬೆಂಗಳೂರು ನೀತಿ ಸಂಸ್ಥೆ ಮುಖ್ಯಸ್ಥ ಸಾಯಿ ಸಮರ್ಥ, ಬಸವರಾಜ ತಾಡಪಳ್ಳಿ, ಪ್ರಶಾಂತ ಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ ಇತರರಿದ್ದರು. 
ರಾಜ್ಯ

ಎಐ ತಂತ್ರಜ್ಞಾನದಿಂದ ಮಾನವನ ಬುದ್ಧಿಮತ್ತೆ ವಿಕಾಸ

ಪ್ರಮುಖ ಮುಖ್ಯಾಂಶಗಳು

  • ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್​ ಅನಿಸಿಕೆ
ಕಲಬುರಗಿ: ಎಐ ತಂತ್ರಜ್ಞಾನದಿಂದ ಮಾನವನ ಬುದ್ಧಿಮತ್ತೆ ವಿಕಾಸವಾಗಲಿದೆ ಎಂದು ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್​ ಹೇಳಿದರು.
ನಗರದ ಸರ್ವ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಬೆಂಗಳೂರಿನ ನೀತಿ ಸಂಸ್ಥೆ ಸಹಯೋಗದಡಿ ಪಿಯು ವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ (ಎಐ)- ಸಮಸ್ಯೆ ಪರಿಹರಿಸುವ ಸವಾಲು ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳು ಜೀವನದುದ್ದಕ್ಕೂ ಓದುವುದು, ಬರೆಯುವುದನ್ನು ಯಾವತ್ತೂ ಬಿಡಬಾರದು. ಅವಶ್ಯಕತೆಗೆ ಅನುಗುಣ ತಂತ್ರಜ್ಞಾನ ಬಳಸಬೇಕು. ಅದರ ಗುಲಾಮರಾಗಬಾರದು, ದುರುಪಯೋಗವೂ ಆಗಬಾರದು ಎಂದು ಸಲಹೆ ನೀಡಿದರು.
ಆಧುನಿಕ ಯುಗದಲ್ಲಿ ಸಮಯಕ್ಕೆ ತಕ್ಕಂತೆ ಜ್ಞಾನ ಅಪ್​ಡೇಟ್​ ಮಾಡಿಕೊಂಡಾಗಲೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆಯಲು ಸಾಧ್ಯ. ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ (ಎಐ)ನಂತಹ ಹೊಸ ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರಾವಿಣ್ಯ ಪಡೆಯುವ ಮೂಲಕ ಭವಿಷ್ಯದಲ್ಲಿ ಬರುವ ಸವಾಲುಗಳನ್ನು ಎದುರಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು ಎಂದರು.
ನೀತಿ ಸಂಸ್ಥೆ ಮುಖ್ಯಸ್ಥ ಹಾಗು ಸರ್ವ ಕಾಲೇಜಿನ ಹಳೆಯ ವಿದ್ಯಾರ್ಥಿ ಸಾಯಿ ಸಮರ್ಥ ಮತ್ತು ಗೆಳೆಯರು ಕಾರ್ಯಾಗಾರದಲ್ಲಿ ಎಐ ಉಪಕರಣ ಬಳಕೆ, ಕೃತಕ ಬುದ್ಧಿಮತ್ತೆ ಉಪಕರಣಗಳಿಗೆ ಸರಿಯಾದ ಸೂಚನೆ ನೀಡಿ ನಮಗೆ ಬೇಕಾದ ನಿಖರ ಮಾಹಿತಿ ಪಡೆಯುವ ವಿಧಾನ ಕುರಿತು ಪ್ರಾಯೋಗಿಕ ತರಬೇತಿ ಮೂಲಕ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಬಸವರಾಜ ತಾಡಪಳ್ಳಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ ಇತರರಿದ್ದರು.