Everyone's participation is needed to control dengue 
ರಾಜ್ಯ

ಡೆಂಘೆ ನಿಯಂತ್ರಣಕ್ಕೆ ಎಲ್ಲರ ಸಹಭಾಗಿತ್ವ ಅಗತ್ಯ

ಚಿಕ್ಕಬಳ್ಳಾಪುರ ಡೆಸ್ಕ್
ಪಾತಪಾಳ್ಯ: ಡೆಂಘೆ ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ಮನೆ ಸುತ್ತ, ಒಳ ಮತ್ತು ಹೋರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ವಿನೋದ್​ಕುಮಾರ್​ ತಿಳಿಸಿದರು.
ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಘೆ ದಿನಾಚರಣೆಯಲ್ಲಿ ಮಾತನಾಡಿ, ಮಳೆಗಾಲದಲ್ಲಿ ಸಾಮಾನ್ಯವಾಗಿ ನೀರು ಶೇಖರಣೆಯಾಗುತ್ತದೆ.ಇದರಿಂದ ವೈರಾಣು ಜ್ವರ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಡೆಂ ಜ್ವರದ ಲಕ್ಷಣ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಡೆಂಘೆ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವವೂ ಅಗತ್ಯ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಫಕೃದ್ಧೀನ್​ ಮಾತನಾಡಿ, ಇದ್ದಕ್ಕಿದ್ದಂತೆ ಬರುವ ಅಧಿಕ ಜ್ವರ, ಕಣ್ಣು ಹಿಂಭಾಗ ನೋವು, ಮೈಕೈ ನೋವು, ಕೀಲುಗಳಲ್ಲಿ ನೋವು, ವಾಂತಿ ಇವುಗಳು ಡೆಂಘೆ ಜ್ವರದ ಲಕ್ಷಣಗಳು ಕಂಡು ಬಂದರೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ ಮಾತನಾಡಿ, ನಿಂತ ನೀರಿನಲ್ಲಿ ಈಡೀಸ್​ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮನೆಯಲ್ಲಿರುವ ತೊಟ್ಟಿ, ಬ್ಯಾರಲ್​ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಹಳೆಯ ಪಾತ್ರೆ, ಮಡಕೆ, ಟಯರ್​, ಬಕೆಟ್​, ಪ್ಲಾಸ್ಟಿಕ್​ ಕಪ್​, ಎಳನೀರಿನ ಚಿಪು$್ಪ ಮೊದಲಾದವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಸೊಳ್ಳೆ ನಿಯಂತ್ರಣ ಎಲ್ಲರ ಜವಾಬ್ದಾರಿ ಎಂದರು.