ಬೆಂಗಳೂರು: ಭಾರತದಲ್ಲಿನ ಸನಾತನ ಸಂಸ್ಕೃತಿಯನ್ನು ಎಲ್ಲರೂ ಗೌರವಿಸುವ ಅಗತ್ಯವಿದೆ. ನಮ್ಮ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠವಾದದ್ದು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಗೆಲುವು ಕನ್ನಡ ಗೆಳೆಯರ ಸಮಿತಿ ಹಾಗೂ ಜಿಕೆಜಿಎಸ್ ಚಾರಿಟಬಲ್ ಟ್ರಸ್ಟ್ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಶ್ರೀನಿವಾಸನಗರದ ಶಂಕರ್‌ನಾಗ್ ವೃತ್ತ ಸಮೀಪದ ಕೆಂಪೇಗೌಡ ಆಟದ ಮೈದಾನದಲ್ಲಿ ಆಯೋಜಿಸಿರುವ ‘ಕರುನಾಡ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಇಂದಿನ ಯುವಜನಾಂಗ ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಪ್ರತಿ ಯುವಕ-ಯುವತಿಯರುಭಾರತದ ಹಿಂದು ಸಂಪ್ರದಾಯವನ್ನು ಅನುಸರಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲಿದೆ. ನಮ್ಮ ಪೂರ್ವಿಕರ ಸಂಪ್ರದಾಯವನ್ನು ಎಂದಿಗೂ ಮರೆಯಬಾರದು. ನಾಡಿನ ಸಂಸ್ಕೃತಿಯನ್ನು ಪೋಷಣೆ ಮಾಡಬೇಕು.ಇವುಗಳು ಪೋಷಣೆ ಮಾಡಿದರೆ ನಮ್ಮ ನಾಡು ಗಟ್ಟಿಯಾಗಿ ಉಳಿಯಲಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಇತ್ತೀಚಿನ ವರ್ಷಗಳಲ್ಲಿ ಹಿಂದು ಸಂಪ್ರದಾಯವನ್ನು ಟೀಕಿಸುವ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬೇಸರದ ಸಂಗತಿ. ಹಿಂದು ಸಂಸ್ಕೃತಿ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಮನೆಯಲ್ಲಿ ಯಾವುದಾದರೂ ಸಂಸ್ಕೃತಿ ಅನುಸರಿಸಿದ್ದರೂ ನಾವು ಭಾರತೀಯರು ಎಂಬ ಭಾವನೆ ಬರಬೇಕು. ಎಲ್ಲ ಧರ್ಮಗಳಗಿಂತ ಹಿಂದು ಧರ್ಮ ಶ್ರೇಷ್ಠವಾದದ್ದು ಎಂದು ಶ್ರೀಗಳು ತಿಳಿಸಿದರು.