ಯಳಂದೂರು ಪಟ್ಟಣದಲ್ಲಿ ಗುರುವಾರ ಎಸ್‌ಐಆರ್ ಕುರಿತು ಸಾರ್ವಜನಿಕರಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಜಾಗೃತಿ ಮೂಡಿಸಲಾಯಿತು. ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಪಪಂ ಮಾಜಿ ಸದಸ್ಯರಾದ ವೈ.ಜಿ.ರಂಗನಾಥ, ರವಿ ಇತರರು ಇದ್ದರು. 
ರಾಜ್ಯ

ಮತಪಟ್ಟಿ ಪರಿಷ್ಕರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ

ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ಗುರುವಾರ ಪಟ್ಟಣದ 1 ಮತ್ತು 2ನೇ ವಾರ್ಡ್‌ನದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಮನೆಮನೆಗೆ ಭೇಟಿ ನೀಡಿ ಮತದಾರರಿಗೆ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಾತನಾಡಿ, ಎಸ್‌ಐಆರ್ ಒಂದು ಸಮಗ್ರ ಮತಪಟ್ಟಿ ಪರಿಷ್ಕರಣೆಯಾಗಿದೆ. ಈಗಾಗಲೇ ರಾಜ್ಯಾದ್ಯಂತ ಜೂ.30ರಿಂದಲೇ ಇದು ಆರಂಭಗೊಂಡಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಪ್ರತಿಯೊಂದು ಮನೆಗೂ ಬಿಎಲ್‌ಒಗಳು ಭೇಟಿ ನೀಡಿ ಮತದಾರರ ಮಾಹಿತಿ ಕಲೆ ಹಾಕಿ ಗಣತಿ ನಮೂನೆ (ಎನ್ಯುಮರೇಷನ್ ಫಾರ್ಮ್) ನೀಡುತ್ತಾರೆ. ಎಲ್ಲ ವಯಸ್ಕ ಮಾತದಾರರು ಇದನ್ನು ಭರ್ತಿ ಮಾಡಿ ಒಂದು ಅರ್ಜಿಯನ್ನು ತಾವು ಇಟ್ಟುಕೊಂಡು ಮತ್ತೊಂದನ್ನು ಕಡ್ಡಾಯವಾಗಿ ನೀಡಬೇಕು. ಈ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಎಲ್ಲರೂ ಕೂಡ ಇದರಲ್ಲಿ ಭಾಗವಹಿಸಬೇಕು. ಇಲ್ಲವಾದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿ ಹೋಗುವ ಅಪಾಯ ಇರುತ್ತದೆ. ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಪಪಂ ಮಾಜಿ ಸದಸ್ಯ ವೈ.ಜಿ.ರಂಗನಾಥ, ರವಿ, ಮಹೇಶ್, ಜಯಲಕ್ಷ್ಮೀ, ಮಲ್ಲಿಕಾರ್ಜುನ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಜಿಲ್ಲಾ ಸ್ವೀಪ್ ಸಮಿತಿಯಿಂದಲೂ ಜಾಥಾ:
ಗುರುವಾರ ಪಟ್ಟಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದಲೂ ಜಾಗೃತಿ ಜಾಥಾದ ಮೂಲಕ ಎಸ್‌ಐಆರ್ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮಕ್ಕೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಚಾಲನೆ ನೀಡಲಾಯಿತು. ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಸಿಬ್ಬಂದಿ, ಪಿಡಿಒಗಳು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.