ಹುಮನಾಬಾದ್ನ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟಕದಿಂದ ಸೋಮವಾರ ಸಾರ್ವಜನಿಕರಿಗೆ ಉಚಿತ ದಿನಪತ್ರಿಕೆ ವಿತರಿಸಿ ಪತ್ರಿಕಾ ದಿನ ಆಚರಿಸಲಾಯಿತು. ಪ್ಯಾಂಥರ್ ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ, ಸಿದ್ದಾರ್ಥ ಜಾನವೀರ, ಸುಶೀಲಕುಮಾರ ಭೋಲಾ, ಗೋಪಾಲ ರೆಡ್ಡಿ, ಮಾಣಿಕ ಪವಾರ ಇತರರಿದ್ದರು.
- ಗಣಪತಿ ಅಷ್ಟೂರೆ ಮನವಿ
- ಹುಮನಾಬಾದ್ಉಚಿತ ದಿನಪತ್ರಿಕೆ ವಿತರಿಸಿ ಪತ್ರಿಕಾ ದಿನಾಚರಣೆ
ಹುಮನಾಬಾದ್: ಪತ್ರಿಕೆಗಳು ಮತ್ತು ಪತ್ರಕರ್ತರು ಸಮಾಜದ ಕಣ್ಣುಗಳಾಗಿದ್ದು, ಜನಸಾಮಾನ್ಯರಿಗೆ ನಿಖರ ಹಾಗೂ ನಿಷ್ಪ್ಪಕ್ಷಪಾತ ಮಾಹಿತಿ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ ಹೇಳಿದರು.
ಪತ್ರಿಕೆ ಓದುವ ಸಂಸತಿ ಬೆಳೆಸುವ ಉದ್ದೇಶದಿಂದ ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟಕದಿಂದ ಪಟ್ಟಣದಲ್ಲಿ ಸೋಮವಾರ ಸಾರ್ವಜನಿಕರಿಗೆ ಉಚಿತ ದಿನಪತ್ರಿಕೆ ವಿತರಿಸಿ ವಿನೂತನವಾಗಿ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಯಾವುದೇ ಮುಲಾಜಿಲ್ಲದೆ ಜನರ ಮುಂದಿಡುವ ಕೆಲಸ ಪತ್ರಕರ್ತರು ನಿರಂತರವಾಗಿ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ದಿನಪತ್ರಿಕೆಗಳನ್ನು ಖರೀದಿಸಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳು, ಯುವಜನರು ಹಾಗೂ ಸರ್ಕಾರಿ ಅಧಿಕಾರಿಗಳು ಪತ್ರಿಕೆಗಳ ಮೂಲಕ ಸಮಕಾಲೀನ ವಿದ್ಯಮಾನಗಳ ಅರಿವು ಬೆಳೆಸಿಕೊಳ್ಳುವುದು ಅಗತ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಂಜೀವಕುಮಾರ ಜುನ್ನಾ ಮಾತನಾಡಿ, ಭಾರತೀಯ ದಲಿತ ಪ್ಯಾಂಥರ್ ವತಿಯಿಂದ ಉಚಿತ ದಿನಪತ್ರಿಕೆಗಳನ್ನು ವಿತರಿಸುವ ಮೂಲಕ ಪತ್ರಿಕಾ ದಿನ ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಪತ್ರಿಕೆ ಓದುವ ಅಭ್ಯಾಸವನ್ನು ಬೆಳೆಸುವುದರ ಜತೆಗೆ ಸಮಾಜದ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದರು.
ಪ್ರಧಾನ ಕಾರ್ಯದರ್ಶಿ ಗುಂಡು ಅತಿವಾಳ, ಪತ್ರಕರ್ತರಾದ ಶೈಲೇಂದ್ರ ಕಾವಡಿ, ಸಜೀಶಕುಮಾರ ಲಂಬೇನೂರ್, ಸೈಯದ್ ರಿಜ್ವಾನ್, ಸೈಯದ್ ಮೋಸಿನ್, ಪ್ರಮುಖರಾದ ಸಿದ್ದಾರ್ಥ ಜಾನವೀರ, ಸುಶೀಲಕುಮಾರ ಭೋಲಾ, ಗೋಪಾಲ್ ರಡ್ಡಿ, ಅಖಿಲೇಶ ಮೇಟಿ, ಲೋಕೇಶ ಮೇತ್ರೆ, ಅನಂತ್ ಮಾಳಗೆ, ದಶರಥ ದಾಂಡೇಕರ್, ಯೋಗಿ, ಸಾಗರ್, ಶಿವಕುಮಾರ ವರವಟ್ಟಿ, ಮಾಣಿಕ್ ಪವಾರ, ವಿಠಲ ಶಿವನಾಯಕ, ಶಿವಾಜಿ ವರವಟ್ಟಿ, ಲೋಕೇಶ್ ಸೇಡೋಳ್, ಗೌತಮ ಮೇಟಿ, ರಾಹುಲ್ ಬೋತಗಿ ಇತರರಿದ್ದರು.