ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಮಾತನಾಡಿದರು. ಆಡಳಿತಾಧಿಕಾರಿ ಎಸ್.ಎಲ್. ನಯನಾ ಇದ್ದರು.
ಯಳಂದೂರು: ಪಟ್ಟಣದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಲ್ಲರೂ ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಕರೆ ನೀಡಿದರು.
ಮಂಗಳವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ತಹಸೀಲ್ದಾರ್ ಎಸ್.ಎಲ್. ನಯನಾ ಅವರ ನೇತೃತ್ವದಲ್ಲಿ ನಡೆದ ಪಟ್ಟಣ ಪಂಚಾಯಿತಿಯ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಮ್ಮ ಪಂಚಾಯಿತಿ ಚಿಕ್ಕದಾಗಿದೆ. ಇಲ್ಲಿಗೆ ಆದಾಯದ ಮೂಲಗಳು ಕಡಿಮೆ ಇದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸದಸ್ಯರು, ಸಾರ್ವಜನಿಕರು ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕು.
ಪಟ್ಟಣದಲ್ಲಿರುವ ಹಳೆಯ ಕಚೇರಿಯ ಕಟ್ಟಡದಲ್ಲಿ ಮಳಿಗೆಗಳ ನಿರ್ಮಾಣ, ಒವರ್‌ಹೆಡ್ ಟ್ಯಾಂಕ್ ಇದ್ದ ಕಡೆ ಮಳಿಗೆ ನಿರ್ಮಾಣ, ಮಾರುಕಟ್ಟೆ ಅಭಿವೃದ್ಧಿ, ಸೂಕ್ತ ವಾಹನ ನಿಲುಗಡೆಗೆ ಸ್ಥಳಾವಕಾಶ, ದ್ವಿಪಥ ರಸ್ತೆಯಲ್ಲಿ ವಿದ್ಯುತ್ ಬಲ್ಬ್‌ಗಳ ಅಳವಡಿಕೆ, ಪಾರ್ಕ್ ನಿರ್ಮಾಣ, ಇ-ಸ್ವತ್ತು ಯೋಜನೆ ಖಾತೆ ಮಾಡಿಸಿಕೊಳ್ಳಲು ಸರ್ಕಾರ ತಂದಿರುವ ಹೊಸ ಮಾರ್ಗಸೂಚಿಗಳನ್ನು ಮನೆಮನೆಗಳಿಗೆ ತಲುಪಿಸಿ ಇಲ್ಲಿಂದ ಆದಾಯ ಕ್ರೋಡೀಕರಿಸುವುದು, ಪಟ್ಟಣ ಪಂಚಾಯಿತಿ ವತಿಯಿಂದ ಸುಸಜ್ಜಿತ ನೂತನ ಹೋಟೆಲ್ ಕಟ್ಟಡ ನಿರ್ಮಾಣ ಮಾಡುವುದು, ಸೇರಿದಂತೆ ಎಲ್ಲರೂ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಇವೆಲ್ಲವನ್ನೂ ಪರಿಗಣಿಸಿ ಸರ್ಕಾರದಿಂದ ನಮಗೆ ಲಭಿಸುವ ಅನುದಾನಗಳ ಲಭ್ಯತೆ, ಅವುಗಳ ವಿನಿಯೋಗ ಹೊಸ ಯೋಜನೆಗಳಿಗೆ ಬೇಕಾಗುವ ಅನುದಾನಗಳ ಅಂದಾಜು ಪಟ್ಟಿ ತಯಾರಿಕೆ, ಪಂಚಾಯಿತಿಗೆ ಬರುವ ಆದಾಯ, ಹೊಸದಾಗಿ ಬರಬಹುದಾದ ಆದಾಯದ ಮೂಲಗಳನ್ನು ಪಟ್ಟಿ ಮಾಡಿ ಬಜೆಟ್ ತಯಾರಿಸಿ ಪಟ್ಟಣದ ಅಭಿವೃದ್ಧಿಗೆ ಪೂಕರವಾಗಿರುವ ಬಜೆಟ್ ಮಂಡಿಸಲಾಗುವುದು ಎಂದರು.
ಆಡಳಿತಾಧಿಕಾರಿ ಎಸ್.ಎಲ್.ನಯನಾ ಮಾತನಾಡಿ, ಅನೇಕರು ಇಲ್ಲಿನ ಫುಟ್‌ಪಾತ್ ತೆರವು, ವಾಹನ ನಿಲ್ದಾಣಕ್ಕೆ ಸ್ಥಳಾವಕಾಶ, ದ್ವಿಚಕ್ರ ವಾಹನ, ಆಟೋ ನಿಲ್ದಾಣ, ಕಸ ತೆರವುಗೊಳಿಸುವುದು ಸೇರಿದಂತೆ ಇತರ ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ನಾನು ಖುದ್ದು ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಪಪಂ ಮಾಜಿ ಸದಸ್ಯರಾದ ಮಹೇಶ್, ಭೀಮಪ್ಪ, ಉಮಾಶಂಕರ, ಮುನವ್ವರ್ ಬೇಗ್, ಮುಖಂಡರಾದ ಮಹೇಶ್, ರೋಟರಿ ಅಧ್ಯಕ್ಷ ವೈ.ಜಿ.ನಿರಂಜನಸ್ವಾಮಿ, ರಾಜಶೇಖರ್, ಮಲ್ಲು, ಶಂಕರ, ಜೆಇ ನಾಗೇಂದ್ರ, ಆರೋಗ್ಯ ನಿರೀಕ್ಷಕ ರಾಘವೇಂದ್ರ, ಜಯಲಕ್ಷ್ಮೀ, ಲಕ್ಷ್ಮೀ, ರೇಖಾ, ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.