ಪಾಂಡವಪುರ ತಾಲೂಕಿನ ಚಿಕ್ಕಾಯರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂಧಿಸಲಾಯಿತು.  
ರಾಜ್ಯ

ಸಹಕಾರ ಸಂಘಗಳ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಿ

ಪಾಂಡವಪುರ: ರೈತರ ಬೆನ್ನೆಲುಬಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲೂಕಿನ ಚಿಕ್ಕಾಯರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಶು ಆಹಾರ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಪ್ರಧಾನವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಹೈನುಗಾರಿಕೆ ಪ್ರಮುಖವಾದ ಪಾತ್ರ ವಹಿಸುತ್ತಿದೆ. ಲಕ್ಷಾಂತರ ರೈತರು ಕೃಷಿಯೊಟ್ಟಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಸಾವಿರಾರು ರೈತ ಕುಟುಂಬಗಳ ಕುಟುಂಬ ನಿರ್ವಹಣೆಗೆ ಹೈನುಗಾರಿಕೆ ಸಹಕಾರಿಯಾಗಿದೆ. ಇಂತಹ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿದರೆ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ಹಾಗಾಗಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪಾರದರ್ಶಕವಾಗಿ ಆಡಳಿತ ನಡೆಸಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ. ಇಲ್ಲಿಯಾವುದೇ ಅವ್ಯವಹಾರಕ್ಕೂ ಆಸ್ಪದ ನೀಡದೆ ಸಂಘದ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಚಿಕ್ಕಾಯರಹಳ್ಳಿ ಸಹಕಾರ ಸಂಘವು ಮಾದರಿಯಾಗಿ ಕೆಲಸ ನಿರ್ವಹಣೆ ಮಾಡಿ ಇಂದು ಸಂಘದ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡಿದೆ. ಸಂಘವು ಇದೇ ರೀತಿ ಅಭಿವೃದ್ಧಿ ಹೊಂದಿ ಜಿಲ್ಲೆಗೆ ಮಾದರಿ ಸಂಘವಾಗಲೆಂದು ಹಾರೈಸಿದರು.
ಮನ್‌ಮುನ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಹೈನುಗಾರಿಕೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಆರ್ಥಿಕ ಸಹಕಾರ ನೀಡುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಕುಟುಂಬಗಳ ನಿರ್ವಹಣೆಯಾಗುತ್ತಿದೆ. ಹೈನುಗಾರಿಕೆಗೆ ಉತ್ತೇಜನೆ ನೀಡುವ ನಿಟ್ಟಿನಲ್ಲಿ ಹಾಲಿಗೆ ಪ್ರೋತ್ಸಾಹಧನ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರೈತರು ಸದಾ ಸ್ಮರಿಸಬೇಕು ಎಂದು ತಿಳಿಸಿದರು.
ಡೇರಿ ಅಧ್ಯಕ್ಷೆ ನಮಿತಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿದರು.
ಡೇರಿ ಉಪಾಧ್ಯಕ್ಷೆ ಸಿ.ಟಿ.ರತ್ನಮ್ಮ, ನಿರ್ದೇಶಕರಾದ ಮಹದೇವಮ್ಮ, ಗೌರಮ್ಮ, ಪ್ರಭಾವತಿ, ಭಾಗ್ಯಾ, ಸುಶೀಲಮ್ಮ, ಶೋಭಾ, ಮಹದೇವಮ್ಮ, ರಾಜಮ್ಮ, ಮಾರ್ಗ ವಿಸ್ತರ್ಣಾಧಿಕಾರಿ ಉಷಾ, ಕಾರ್ಯದರ್ಶಿ ರುದ್ರಾಂಬಿಕೆ, ಸಂಧ್ಯಾ, ಮುಖಂಡರಾದ ರಾಜೇಂದ್ರ, ರಘು, ವಿರೂಪಾಕ್ಷ, ಗೋವಿಂದಯ್ಯ, ಪ್ರಭುದೇವ, ರಜಿನಿ, ನಿರಂಜನ್, ಚಂದ್ರಶೇಖರ್, ನಾಗಣ್ಣ, ಪ್ರಸಾದ್, ಲೋಕೇಶ್, ಆನಂದ್ ಸೇರಿದಂತೆ ಹಲವರು ಇದ್ದರು.