ಬೆಂಗಳೂರು: ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಆಯೋಜಿಸಿರುವ 3 ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ.
ಮೊದಲ ದಿನದ ಉತ್ಸವದಲ್ಲಿ ಮಂಟಪ, ಮಥನ, ಅಕ್ಷರ, ಅಂಗಳ, ಅನಾವರಣ, ಮುಖಾಮುಖಿ, ಕಾವ್ಯ ಕಣಜ, ನ್ಯೂಝೆನ್ ಹಾಗೂ ಚಿಣ್ಣರಲೋಕ ವೇದಿಕೆಗಳಲ್ಲಿ ವಿವಿಧ ವಿಚಾರಗಳ ಕುರಿತ ಗೋಷ್ಠಿಗಳು ನಡೆದವು. ಕನ್ನಡ, ತೆಲುಗು, ತಮಿಳು, ಮಲಯಾಳಿ, ಬಂಗಾಳಿ ಹಾಗೂ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದ ಲೇಖಕರು, ಚಿಂತಕರು, ಕಲಾವಿದರು, ಪ್ರಕಾಶಕರು, ಪುಸ್ತಕಮಾರಾಟಗಾರರು ಹಾಗೂ ತಜ್ಞರು ಭಾಗವಹಿಸಿದ್ದರು.
ಭಾಷಾ ಪ್ರಾಬಲ್ಯ, ಭಾರತೀಯ ಭಾಷೆಗಳ ನಡುವಿನ ಸಂಬಂಧ, ಭಾಷಾಂತರ ಹಾಗೂ ಬರವಣಿಗೆಯ ಮೇಲೆ ಪ್ರಭಾವ ಬೀರುವ ಅಂಶಗಳು ಮತ್ತು ಇಂಗ್ಲಿಷ್, ಹಿಂದಿಯಂತಹ ಭಾಷೆಗಳ ಬಳಕೆಯಿಂದ ಪ್ರಾದೇಶಿಕ ಭಾಷೆಗಳ ಬರವಣಿಗೆಯ ಮೇಲೆ ಎದುರಾಗುವ ಸವಾಲುಗಳ ಕುರಿತು ಚರ್ಚೆ ನಡೆಯಿತು. ಹಿರಿಯ ಸಾಹಿತಿರಾದ ಓ.ಎಲ್. ನಾಗಭೂಷಣ ಸ್ವಾಮಿ, ಎಂ.ಎಸ್.ಆಶಾದೇವಿ, ಎನ್.ಎಸ್.ಮಾಧವನ್ ಹಾಗೂ ಕೇಶವ್ ಗುಹಾ ಮಾತನಾಡಿದರು.
ಕುವೆಂಪು ಮತ್ತು ಜಿ.ಎಸ್.ಶಿವರುದ್ರಪ್ಪ ಅವರ ಸಾಹಿತ್ಯ ರಚನೆಯಲ್ಲಿನ ಸಾಮ್ಯತೆ, ಭಿನ್ನತೆಗಳು, ಪ್ರಕೃತಿ, ಸಾಮಾಜಿಕ ಬದುಕು ಮತ್ತು ಮಾನವ ಸಂಬಂಧಗಳು ಅವರ ಕಾವ್ಯದಲ್ಲಿ ಮೂಡಿಬಂದಿರುವ ರೀತಿ ಹಾಗೂ ಅವರ ಕಾವ್ಯದ ಲೌಕಿಕ, ಅನುಭಾವಿಕ ಮತ್ತು ಸಂವೇದನಾತ್ಮಕ ನೆಲೆಗಳ ಕುರಿತು ವಿಚಾರ ವಿನಿಮಯ ನಡೆಯಿತು.ಮಥನ ವೇದಿಕೆಯಲ್ಲಿ ಸಾಹಿತಿರಾದ ರಾಜಾರಾಂ ತಲ್ಲೂರು ಹಾಗೂ ಪ.ಸಕುಮಾರ್ ಸಂವಾದ ನಡೆಸಿದರು. ಸಾಹಿತ್ಯ ಉತ್ಸವದ ನಿರ್ದೇಶಕ ಸತೀಶ್ ಚಪ್ಪರಿಕೆ ಸೇರಿ ಮತ್ತಿತರರಿದ್ದರು.
ಪ್ರತಿಯೊಂದು ಜೀವನವೂ ಒಂದು ಕಥೆ ಇದ್ದಂತೆ. ಬದುಕಿನ ಸಣ್ಣಪುಟ್ಟ ಘಟನೆಗಳು, ಯಶಸ್ಸು, ಸೋಲು, ಸವಾಲು, ಕಷ್ಟ ಹಾಗೂ ನಷ್ಟಗಳು ನಮಗೆ ಪಾಠ ಕಲಿಸುತ್ತದೆ. ಇತರರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದಕ್ಕಿಂತ ನಮ್ಮದೇ ಬದುಕಿನ ಪಯಣವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಜೀವನವು ಕೇವಲ ಗುರಿ ತಲುಪುವ ಪ್ರಯಾಣವಾಗದೆ, ಆ ಹಾದಿಯಲ್ಲಿ ದೊರೆಯುವ ಪ್ರತಿಯೊಂದು ಅನುಭವವನ್ನೂ ಆಸ್ವಾದಿಸುವ ಪಯಣವಾಗಬೇಕು. ನಾಟಕ, ಸಾಹಿತ್ಯ, ಕಾದಂಬರಿ, ಥಿಯೇಟರ್, ಸಿನಿಮಾ ಮೂಲಕ ಜಗತ್ತಿಗೆ ಕಾಣಿಸಿಕೊಳ್ಳಬಹುದು. ಸಿನಿಮಾಗೆ ಕಥೆಯೇ ಜೀವಾಳ. ಚಿತ್ರದಲ್ಲಿ ಕಥೆ, ಪಾತ್ರಗಳು ಮತ್ತು ಸಂಗೀತ ಮುಖ್ಯ ಎಂದು ನಟ ರಮೇಶ್ ಅರವಿಂದ್ ಹೇಳಿದರು. ಇದೇವೇಳೆ ತಮ್ಮ ಬದುಕು, ಅನುಭವ ಮತ್ತು ಸಿನಿಪಯಣದ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.
ಕಲೆ, ಸೃಜನಶೀಲತೆಯಲ್ಲಿರುವ ಪ್ರಾದೇಶಿಕ ಸೊಗಡು, ರಾಗ, ಸ್ವಾದ ಮತ್ತುಪರಿಮಳವನ್ನು ಯಾವುದೇ ತಂತ್ರಜ್ಞಾನವೂ ಸಂಪೂರ್ಣವಾಗಿ ನಕಲು ಮಾಡಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನವು ಹಲವು ವಿಷಯಗಳನ್ನು ಮರುಸೃಷ್ಟಿಸಬಲ್ಲದಾದರೂ, ಕಲೆಯಲ್ಲಿರುವ ಸ್ಥಳೀಯತೆ ಮತ್ತು ಸೃಜನಶೀಲತೆಯ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ.
ಡಾ.ಎಂ.ಎಸ್. ಮೂರ್ತಿ, ಕರ್ನಾಟಕ ಲಲಿತಾಕಲಾ ಅಕಾಡೆಮಿ ಮಾಜಿ ಅಧ್ಯಕ್ಷ.