ಹುಮನಾಬಾದ್​ನ ಮಾಣಿಕಪ್ರಭು ಕ್ರೀಡಾಂಗಣದಲ್ಲಿ ಬಡಿಗೆಗಳ ಸಹಾಯದಿಂದ ವಾಕಿಂಗ್​ ಮಾಡುತ್ತಿರುವ ಡಿಸಿಸಿ ಬ್ಯಾಂಕ್​ ಉದ್ಯೋಗಿ ಶಿವಕುಮಾರ ಬಿರಾದಾರ.  
ರಾಜ್ಯ

ಬಡಿಗೆ ಆಸರೆಯಾದರೂ ಉತ್ಸಾಹಕ್ಕಿಲ್ಲ ಮಿತಿ

ಪ್ರಮುಖ ಮುಖ್ಯಾಂಶಗಳು

  • ಮಾಣಿಕಪ್ರಭು ಕ್ರೀಡಾಂಗಣದಲ್ಲಿ ವಿಕಲಾಂಗ ಶಿವಕುಮಾರ ಬಿರಾದಾರ ನಿತ್ಯ 2 ಕಿಮೀ ವಾಕಿಂಗ್​, ವ್ಯಾಯಾಮ
ಹುಮನಾಬಾದ್​: ದೈಹಿಕ ಸವಾಲುಗಳಿವೆ ಎಂದು ಬದುಕಿನ ಉತ್ಸಾಹಕ್ಕೆ ಕಡಿವಾಣ ಹಾಕಿಕೊಳ್ಳಬೇಕಿಲ್ಲ. ಆತ್ಮವಿಶ್ವಾಸ, ಛಲ ಮತ್ತು ಆರೋಗ್ಯ ಕಾಳಜಿ ಇದ್ದರೆ ಎಂಥದ್ದೇ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಕಠೋಳ್ಳಿ ಗ್ರಾಮದ ನಿವಾಸಿ, ಹುಮನಾಬಾದ್​ ಡಿಸಿಸಿ ಬ್ಯಾಂಕ್​ ಉದ್ಯೋಗಿಯಾಗಿರುವ ವಿಕಲಾಂಗ ಶಿವಕುಮಾರ ಬಿರಾದಾರ ದಿನಚರಿಯೇ ಸಾಕ್ಷಿ.
ಒಂದು ಕಾಲಿನಲ್ಲಿ ಸಂಪೂರ್ಣ ಶಕ್ತಿಯಿಲ್ಲ. ಹೀಗಾಗಿ ನಡೆದಾಡಲು ಎರಡು ಕೈಗಳಿಗೆ ಬಡಿಗೆಗಳ ಆಸರೆ. ಓಡಾಡಲು ತ್ರಿಚಕ್ರ ವಾಹನದ ನೆರವು. ಆದರೂ ಆರೋಗ್ಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಶಿವಕುಮಾರ ಪ್ರತಿದಿನ ಬೆಳಗ್ಗಿನ ಜಾವ 5.30ರ ಸುಮಾರಿಗೆ ತ್ರಿಚಕ್ರ ವಾಹನದಲ್ಲಿ ಮಾಣಿಕಪ್ರಭು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಬಳಿಕ ಎರಡೂ ಕೈಗಳಲ್ಲಿ ಬಡಿಗೆ ಹಿಡಿದು ನಿಧಾನವಾಗಿ ಹೆಜ್ಜೆ ಹಾಕುತ್ತ ಸುಮಾರು ಎರಡು ಕಿಮೀ ವಾಕಿಂಗ್​ ಬಳಿಕ ಓಪನ್​ ಜಿಮ್​ನಲ್ಲಿ ವಿವಿಧ ರೀತಿಯ ವ್ಯಾಯಾಮ ಮಾಡುತ್ತಾರೆ.
ಕೈ, ಭುಜ ಸೇರಿ ದೇಹದ ವಿವಿಧ ಭಾಗಗಳಿಗೆ ಶಕ್ತಿ ಬರುವಂತೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಅವರು, ವ್ಯಾಯಾಮ ಮಾಡುವಾಗ ಬಡಿಗೆಗಳನ್ನು ಪಕ್ಕದಲ್ಲಿಡುತ್ತಾರೆ. ಸಾಧ್ಯವಾದಷ್ಟು ದೈಹಿಕ ಕಸರತ್ತು ಮುಂದುವರಿಸುವ ಅವರ ಉತ್ಸಾಹ ಗಮನ ಸೆಳೆಯುತ್ತದೆ.

ಆರೋಗ್ಯ ಕಾಳಜಿಗೆ ಮಾದರಿ

ಇಂದಿನ ದಿನಗಳಲ್ಲಿ ಬಹುತೇಕ ಆರೋಗ್ಯವಂತರಲ್ಲಿ ಬೆಳಗ್ಗಿನ ವಾಕಿಂಗ್​ ಮತ್ತು ವ್ಯಾಯಾಮಕ್ಕೆ ಸಮಯವಿಲ್ಲ ಎಂಬ ನೆಪ ಸಾಮಾನ್ಯವಾಗಿದೆ. ಆದರೆ ದೈಹಿಕ ಸವಾಲುಗಳ ನಡುವೆಯೂ ಪ್ರತಿದಿನ ಬೆಳಗ್ಗೆ ಕ್ರೀಡಾಂಗಣಕ್ಕೆ ಆಗಮಿಸಿ ವಾಕಿಂಗ್​ ಮತ್ತು ವ್ಯಾಯಾಮ ಮಾಡುವ ಶಿವಕುಮಾರ ಬಿರಾದಾರ ಶಿಸ್ತು, ಆತ್ಮವಿಶ್ವಾಸ ಮತ್ತು ಜೀವನೋತ್ಸಾಹ ಇತರರಿಗೂ ಪ್ರೇರಣೆಯಾಗಿದೆ. ದೇಹಕ್ಕೆ ಸಾಧ್ಯವಾದಷ್ಟು ಕಸರತ್ತು ನೀಡಬೇಕು. ಯಾವುದೇ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂಬ ಸಂದೇಶವನ್ನು ಅವರ ದಿನಚರಿ ಸಾರುವಂತಿದೆ. ಉದ್ಯೋಗದ ಜವಾಬ್ದಾರಿ ನಡುವೆಯೂ ಆರೋಗ್ಯಕ್ಕೆ ಸಮಯ ಮೀಸಲಿಡುತ್ತಿರುವ ಶಿವಕುಮಾರ ಪ್ರಯತ್ನ ಕ್ರೀಡಾಂಗಣಕ್ಕೆ ಬರುವವರ ಗಮನ ಸೆಳೆಯುತ್ತಿದೆ.