ನಿಖಿಲ್ ಕಾಮತ್ ಪಾಡ್ಕಾಸ್ಟ್ಗೆ ಆಗಮಿಸಿದ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ
- ನಿಖಿಲ್ ಕಾಮತ್ ಪಾಡ್ಕಾಸ್ಟ್ಗೆ ಆಗಮಿಸಿದ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ
- ನನಗೆ ನನ್ನ ಪಾಲಕರ ಆಸೆ ಈಡೇರಿಸಲು ಸಾಧ್ಯವಾಗಿಲ್ಲ ರಿಷಿ
- ನಿಖಿಲ್ ಜೊತೆ ಕನ್ನಡದಲ್ಲಿ ಮಾತನಾಡಿದ ಅಕ್ಷತಾ ಮೂರ್ತಿ
- ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿರುವ ಈ ಪಾಡ್ಕಾಸ್ಟ್
ಮುಂಬೈ: ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಉನ್ನತವಾದ ಶಿಕ್ಷಣವನ್ನು ಪಡೆದು ಒಳ್ಳೆಯ ಕೆಲಸವನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬ ಪಾಲಕರ ಆಸೆ ಅಥವಾ ಕನಸಾಗಿರುತ್ತದೆ ಎಂದರೆ ಸುಳ್ಳಲ್ಲ.
ಆದರೆ ಪಾಲಕರು ಆಸೆಯನ್ನು ಈಡೇರಿಸುವ ಬದಲು ಅದಕ್ಕಿಂತ ಉನ್ನತವಾದನನ್ನು ಸಾಧಿಸಿದರೆ ಅದಕ್ಕಿಂತ ದೊಡ್ಡ ಬಹುಮಾನ ಇನ್ನೊಂದಿರುವುದಿಲ್ಲ. ಇದೇ ರೀತಿಯ ಘಟನೆ ಯುಕೆಯ ಮಾಜಿ ಪ್ರಧಾನಿಯೊಬ್ಬರ ಜೀವನದಲ್ಲಿ ಘಟಿಸಿದೆ ಎಂದರೆ ನೀವು ನಂಬಲೇಬೇಕು.
ನಾನು ನನ್ನ ಪಾಲಕರ ಆಸೆಯನ್ನು ಇಡೇರಿಸಲಿಲ್ಲ!
ಜಿರೋಧಾ ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್ಕಾಸ್ಟ್ (Nikhil Kamath Podcast) ಗೆ ಆಗಮಿಸಿದ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ, ತಮ್ಮ ವೃತ್ತಿ ಜೀವನ, ವ್ಯಾಪರ, ರಾಜಕಾರಣ ಹೀಗೆ ವಿವಿಧ ವಿಷಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಅಕ್ಷತಾ ತಮ್ಮ ಪಾಲಕರಾದ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ತಾಯಿ ಸಂಸದೆ ಸುಧಾ ಮೂರ್ತಿ ಬಗ್ಗೆ ಮಾತನಾಡಿದ ನಂತರ, ರಿಷಿ ತಮ್ಮ ತಂದೆ-ತಾಯಿ ಹಾಗೂ ಅವರ ಬಾಲ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ತಂದೆ ಯಶ್ವೀರ್ ಸುನಕ್ ಡಾಕ್ಟರ್ ಆಗಿದ್ದರು ಮತ್ತು ತಾಯಿ ಉಷಾ ಸುನಕ್ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ನಾನು ಚಿಕ್ಕವನಿದ್ದಾಗ ಮನೆ-ಮನೆಗೆ ಹೋಗಿ ನಮ್ಮ ತಂದೆ ಬಳಿ ಚಿಕಿತ್ಸೆಗೆ ಒಳಗಾದ ಜನರಿಗೆ ಔಷಧ ತಲುಪಿಸುತ್ತಿದೆ. ನನ್ನ ಪಾಲಕರಿಗೆ ನನ್ನನ್ನು ವೈದ್ಯನಾಗಿ ನೋಡಬೇಕೆಂಬ ಆಸೆ ಬಹಳ ಇತ್ತು.
ಆದರೆ ನಾನು ವ್ಯಾಪಾರಿಯಾದೆ ನಂತರ ರಾಜಕೀಯಕ್ಕೆ ಬಂದು, ದೇಶದ ಪ್ರಧಾನಿ ಸ್ಥಾನವನ್ನು ಸಹ ತಲುಪಿದೆ. ಆದರೂ ನನ್ನ ಪಾಲಕರ ಆಸೆಯನ್ನು ಇಡೇರಿಸಲು ಆಗಲಿಲ್ಲ ಎನ್ನುವುದು ನನ್ನ ಮನಸ್ಸಿಂದ ಇನ್ನು ಹೋಗಿಲ್ಲ ಎಂದು ರಿಷಿ ಹೇಳಿದ್ದಾರೆ.
ಕನ್ನಡದಲ್ಲಿ ಮಾತನಾಡಿದ ಅಕ್ಷತಾ ಮೂರ್ತಿ!
ನಿಖಿಲ್ ಕಾಮತ್ ನಡೆಸುವ ಪಾಡ್ಕಾಸ್ಟ್ ಬಹುತೇಕ ಇಂಗ್ಲೀಷ್ನಲ್ಲೇ ಇರುತ್ತದೆ. ಆದರೆ ಕಾಮತ್ ತನ್ನ ಪಾಡ್ಕಾಸ್ಟ್ಗೆ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಕರೆತಂದಾಗ ವಿಶೇಚವಾದ ಘಟನೆ ಒಂದು ನಡೆದಿದ್ದು, ಇದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಪಾಡ್ಕಾಸ್ಟ್ ಮಧ್ಯದಲ್ಲಿ ನಿಖಿಲ್ ಅಕ್ಷತಾ ನೀವು ಕನ್ನಡವನ್ನು ಮರೆತಿಲ್ಲವಲ್ಲ ಎಂದು ಕೇಳಿದಾಗ, ಛೇ..ಇಲ್ಲ ನನಗೆ ಕನ್ನಡ ಚೆನ್ನಾಗಿಯೇ ಬರುತ್ತೆ, ಆದರೆ ಇವರಿಗೆ (ರಿಷಿ) ಒಂದು ಶಬ್ದವು ಬರುವುದಿಲ್ಲ ಎಂದು ಹೇಳಿದ್ದಾರೆ. ಆಗ ನಿಖಿಲ್ ಹಾಗಾದರೆ ನಾವು ಇವರ ಬಗ್ಗೆ ಕನ್ನಡದಲ್ಲಿ ಮಾತನಾಡಬಹುದು ಅಲ್ಲವೇ ಎಂದು ತಮಾಷೆ ಮಾಡಿದ್ದಾರೆ.
ಅಕ್ಷತಾ ಮತ್ತು ನಿಖಿಲ್ ಕನ್ನಡದಲ್ಲಿ ಮಾತನಾಡುತ್ತಿರುವಾಗ ರಿಷಿ ಸುನಕ್ ಏನು ಅರ್ಥವಾಗದ ರೀತಿಯಲ್ಲಿ ಇಬ್ಬರ ಮಾತನ್ನು ಕೇಳಿಸಿಕೊಳ್ಳತ್ತಾ ನಗುತ್ತಿರುವುದನ್ನು ನೋಡಬಹುದಾಗಿದೆ.
ಯಾರು ಈ ರಿಷಿ ಸುನಕ್?
1980ರಲ್ಲಿ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದ ರಿಷಿ ಸುನಕ್, ಭಾರತೀಯ ಮೂಲದ ಮೊದಲ ಬ್ರಿಟಿಷ್ ರಾಜಕಾರಣಿ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ (UK) ಮಾಜಿ ಪ್ರಧಾನ ಮಂತ್ರಿಯಾಗಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿರುವ ರಿಷಿ, ವೃತ್ತಿಜೀವನದ ಆರಂಭದಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್‌ನಂತಹ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ ರಾಜಕೀಯಕ್ಕೆ ಪ್ರವೇಶಿಸಿದರು. ಇವರು ಭಾರತದ ಪ್ರಸಿದ್ಧ ಉದ್ಯಮಿ ಹಾಗೂ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ (ಅಕ್ಷತಾ ಮೂರ್ತಿ ಅವರ ಪತಿ) ಎನ್ನುವುದು ವಿಶೇಷ.
ಕನ್ಸರ್ವೇಟಿವ್ ಪಕ್ಷದ ನಾಯಕರಾಗಿದ್ದ ರಿಷಿ ಸುನಕ್ 2022 ರಿಂದ 2024 ರವರೆಗೆ ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬ್ರಿಟನ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದಿದ್ದ ಇವರು ಪ್ರಧಾನಿಯಾಗುವ ಮೊದಲು ಇವರು ಬ್ರಿಟನ್‌ನ ಹಣಕಾಸು ಸಚಿವರಾಗಿ (Chancellor of the Exchequer) ಕಾರ್ಯನಿರ್ವಹಿಸಿದ್ದರು.
ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಇವರು ಘೋಷಿಸಿದ ಆರ್ಥಿಕ ಪ್ಯಾಕೇಜ್‌ಗಳು ಜನಪ್ರಿಯತೆ ತಂದುಕೊಟ್ಟಿದ್ದವು. ಹಿಂದೂ ಧರ್ಮದ ಅನುಯಾಯಿಯಾಗಿರುವ ರಿಷಿ, ಬ್ರಿಟನ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದು ಭಾರತೀಯರಲ್ಲಿ ಹೆಮ್ಮೆಯ ವಿಷಯವಾಗಿತ್ತು,(ಏಜನ್ಸೀಸ್).