Karnataka High Court 
ರಾಜ್ಯ

ಕೋಗಿಲು ಬಡಾವಣೆ ಮನೆಗಳ ತೆರವು: ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ನಿವಾಸಿಗಳು | Karnataka High Court

ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಬಳಿಯ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ಸುಮಾರು ‌300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ರಾಜ್ಯ ಸರ್ಕಾರ ನಿರ್ಗತಿಕರನ್ನಾಗಿಸಲಾಗಿದೆ ಎಂದು ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್​(Karnataka High Court) ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರ, ಬೆಂಗಳೂರು ಮಹಾ ನಗರ ಪಾಲಿಕೆ, ಬೆಂಗಳೂರು ಪೊಲೀಸ್​ ಆಯುಕ್ತರು ಮತ್ತು ಬೆಂಗಳೂರು ಉತ್ತರ ತಾಲ್ಲೂಕು ತಹಸೀಲ್ದಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಕೆಡವುದಕ್ಕೂ ಮುನ್ನ ಯಾವುದೇ ನೋಟಸ್​ ಜಾರಿ ಮಾಡಿಲ್ಲ. ತಮ್ಮ ಅಹವಾಲುಗಳನ್ನು ಆಲಿಸಿಲ್ಲ. ಬಡಾವಣೆಯಲ್ಲಿ ನೆಲೆಸಿರುವ ಹಲವು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಬಹುತೇಕರು ತಮ್ಮ ಮನೆಗಳಿಗೆ ಸಂಬಂಧಿಸಿದಂತೆ ದಾಖಲೆ ಇಟ್ಟುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ಅಕ್ರಮ ಒತ್ತುವರಿ ಎಂಬ ಆರೋಪದಲ್ಲಿ ಮನೆಗಳನ್ನು ತೆರವು ಮಾಡುವುದಕ್ಕೂ ಮುನ್ನ ಷೋಕಾಸ್​ ನೋಟಿಸ್​ ಜಾರಿ ಮಾಡಿ 15 ದಿನಗಳ ಕಾಲಾವಕಾಶ ನೀಡಬೇಕು. ಬುಲ್ಡೋಜರ್ ಬಳಕೆ ಮಾಡಿ ಮನೆ ನೆಲಸಮಗೊಳಿಸಬಾರದು. ತೆರವು ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ಲಿಖಿತ ನೋಟಿಸ್​ ಜಾರಿ ಮಾಡಿ, ಅವರರನ್ನು ವಿಚಾರಣೆಗೊಳಪಡಿಸಲು ಸಮಯಾವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಸರ್ಕಾರದ ಅಧಿಕಾರಿಗಳು ಸುಪ್ರೀಂ ಕೋರ್ಟ್​ನ ಈ ಆದೇಶಕ್ಕೆ ತದ್ವಿರುದ್ದವಾಗಿ ನಡೆದುಕೊಂಡು, ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಬಡಾವಣೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನೂರಾರ ವಿದ್ಯಾರ್ಥಿಗಳ ಸಮವಸ್ತ್ರ, ಪುಸ್ತಕ, ಹಾಲ್​ ಟಿಕೆಟ್​ಗಳು ನಾಶವಾಗಿದ್ದು, ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಫಕೀರ್​ ಮತ್ತು ವಾಸಿಂ ಕಾಲೊನಿಯ ಎಲ್ಲಾ ನಿರಾಶ್ರಿತರಿಗೆ ಅಲ್ಲಿಂದ 5 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಪುನರ್ವಸತಿ ಅಥವಾ ಪರ್ಯಾಯ ವಸತಿ ಒದಗಿಸಬೇಕು. ಅದಕ್ಕಾಗಿ ಸಮೀಕ್ಷೆ ನಡೆಸಬೇಕು. ಹಲವಾರು ವರ್ಷಗಳ ಶ್ರಮದಿಂದ ನಿರ್ಮಿಸಿರುವ ಮನೆಗಳನ್ನು ಕೆಡವಿರುವುದರಿಂದ ಪರಿಹಾರ ಒದಗಿಸಬೇಕು. ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಕೋರಲಾಗಿದೆ,(ಏಜನ್ಸೀಸ್).