ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಸಿ.ಎಂ.ಜೋಶಿ ವಕೀಲರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
- ವಿಶ್ರಾಂತ ನ್ಯಾಯಮೂರ್ತಿ ಸಿ.ಎಂ.ಜೋಶಿ ಪ್ರತಿಪಾದನೆ
- ಸಿಯುಕೆನಲ್ಲಿ ವಕೀಲರು, ವಿದ್ಯಾರ್ಥಿಗಳೊಂದಿಗೆ ಸಂವಾದ
ಕಲಬುರಗಿ: ಪಠ್ಯ ಜ್ಞಾನ ಜತೆ ಪ್ರಾಯೋಗಿಕ ಅರಿವು, ಸಮಗ್ರ ತಯಾರಿ ಮತ್ತು ಜವಾಬ್ದಾರಿಯುತ ವಕಾಲತ್ತು ಅತ್ಯಂತ ಅಗತ್ಯ. ನ್ಯಾಯಾಲಯದಲ್ಲಿ ಅನಗತ್ಯ ವಾಗ್ವಾದಗಳಿಗೆ ಬದಲು ವಿಷಯದ ಆಳ ಅಧ್ಯಯನ, ಸಂಶೋಧನೆ ಮತ್ತು ನೈತಿಕ ಮೌಲ್ಯಾಧಾರಿತ ವೃತ್ತಿಪರತೆಯೇ ಕಾನೂನು ೇತ್ರದಲ್ಲಿ ಯಶಸ್ಸಿನ ಪ್ರಮುಖ ಆಧಾರ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಸಿ.ಎಂ. ಜೋಶಿ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ)ಲ್ಲಿ ಕಾನೂನು ವಿಭಾಗದಿಂದ ಕಾನೂನು ವೃತ್ತಿಯ ಪ್ರಾಯೋಗಿಕ ಆಯಾಮ, ನ್ಯಾಯಾಲಯದ ಶಿಷ್ಟಾಚಾರ, ವೃತ್ತಿಪರ ನೀತಿಶಾಸ, ಕಾನೂನು ಸಂಶೋಧನೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪಾತ್ರ ಕುರಿತು ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ಪದವಿ ಪೂರ್ಣಗೊಳಿಸಿದರೂ ಅಧ್ಯಯನ ಮುಗಿಯುವುದಿಲ್ಲ. ಅಲ್ಲಿಂದಲೇ ನಿಜವಾದ ವೃತ್ತೀಜಿವನ ಆರಂಭವಾಗುತ್ತದೆ. ನಿರಂತರ ಅಧ್ಯಯನ ಮತ್ತು ಜೀವನಪರ್ಯಂತ ಕಲಿಕೆ ಮನೋಭಾವ ಬೆಳೆಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಆಧಾರಿತ ಕಾನೂನು ಸಹಾಯಕ ಸಾಧನಗಳ ಅತಿಯಾದ ಮತ್ತು ವಿಮರ್ಶಾತ್ಮಕವಲ್ಲದ ಬಳಕೆ ಬಗ್ಗೆ ಎಚ್ಚರಿಕೆ ನೀಡಿದರು.
ತಮ್ಮ ಶೈಕ್ಷಣಿಕ ಪಯಣ, ವಕೀಲ ಮತ್ತು ನ್ಯಾಯಾಧೀಶರಾಗಿ ಪಡೆದ ಅನುಭವ, ವೃತ್ತೀಜಿವನದಲ್ಲಿ ಎದುರಿಸಿದ ಸವಾಲು, ಯಶಸ್ಸಿನ ಹಿಂದಿರುವ ಕಠಿಣ ಪರಿಶ್ರಮ, ಶಿಸ್ತು ಮತ್ತು ಪ್ರಾಯೋಗಿಕ ಅನುಭವದ ಮಹತ್ವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ವಿಜ್ಞಾನೇಶ್ವರ ಟ್ರಸ್ಟ್ನ ಮಹಾದೇವಯ್ಯ ಕರದಳ್ಳಿ, ಪ್ರಾಧ್ಯಾಪಕಿ ಡಾ.ಶಶಿರೇಖಾ ಮಾಳಗಿ, ಡಾ.ಜಗದೀಶಚಂದ್ರ ಟಿ.ಜಿ., ಡಾ.ರೇಣುಕಾ ಗುಬ್ಬೇವಾಡ, ಡಾ.ಜಯಂತ ಬೋರುವಾ, ಡಾ.ಕೆ.ಎಂ. ಕೃಷ್ಣಶೇಖರ ಶರ್ಮಾ, ಪಿ.ವೈಷ್ಣವಿ ನಾರಾಯಣ್, ಜುನು ದಾಸ್ ಸೇರಿ ಕಾನೂನು ವಿಭಾಗದ ಸಂಶೋಧನಾ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾನೂನು ವಿಭಾಗದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ ಸಂಯೋಜಿಸಿದರು. ಮುಖ್ಯಸ್ಥ ಡಾ.ಅನಂತ ಚಿಂಚುರೆ ಸ್ವಾಗತಿಸಿದರು. ವಂದಿತಾ ತಿವಾರಿ ನಿರೂಪಣೆ ಮಾಡಿದರು.
ಕಾನೂನು ಸಂಶೋಧನೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ನಮ್ಮ ಮಾನವೀಯ ವಿವೇಕ, ಪರಿಶೀಲನೆ ಮತ್ತು ನೈತಿಕ ಹೊಣೆಗಾರಿಕೆ ಅತ್ಯಗತ್ಯ. ಈ ವೃತ್ತಿಯಲ್ಲಿ ಕಲಿಕೆ ನಿರಂತರವಾಗಿರಬೇಕು.
— > ಸಿ.ಎಂ.ಜೋಶಿ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ