ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟನೆ
ಬೆಂಗಳೂರು: ಎಥನಾಲ್ ಮಿಶ್ರಿತ (ಇ20) ಪೆಟ್ರೋಲ್‌ನಲ್ಲಿ ನೀರು ಮತ್ತು ಕ್ಲೋರೈಡ್ ಪ್ರಮಾಣ ಹೆಚ್ಚಾಗಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು, ದೇಶಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸಿದ್ದು, ನಿಯಮಾವಳಿಗಳಿಗೆ ಅನುಗುಣವಾಗಿ ಇಂಧನದ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಸ್ಪಷ್ಟಪಡಿಸಿವೆ.
500 ಪಿಪಿಎಂ ಕ್ಲೋರೈಡ್ ಹಾಗೂ ನೀರು ಮಿಶ್ರಣಗೊಂಡಿದೆ ಎಂಬ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದು ಕಂಪನಿಗಳು ತಿಳಿಸಿವೆ. ಗ್ರಾಹಕರ ಹಿತಾಸಕ್ತಿ,ವಾಹನಗಳ ಕಾರ್ಯಕ್ಷಮತೆಗೆ ಮೊದಲ ಆದ್ಯತೆ ನೀಡಲಾಗಿದೆ. ಇಂಧನ ಪೂರೈಕೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಸಂಸ್ಕರಣಾಗಾರಗಳಿಂದ ಸರಬರಾಜಾಗುವ ಪೆಟ್ರೋಲ್‌ನ ನೂರಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕ್ಲೋರೈಡ್ ಪ್ರಮಾಣವು ಅತ್ಯಂತ ಕನಿಷ್ಠ ಅಂದರೆ 1 ಪಿಪಿಎಂ ಒಳಗೆ ಇರುವುದು ದೃಢಪಟ್ಟಿದೆ. 10 ದಿನಗಳಲ್ಲಿ ದೇಶದ 80 ಡಿಸ್ಟಿಲರಿಗಳಿಂದ ಸಂಗ್ರಹಿಸಿದ ಎಥನಾಲ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲದರಲ್ಲೂ ಕ್ಲೋರೈಡ್ ಪ್ರಮಾಣ 3 ಪಿಪಿಎಂ ನಷ್ಟಕ್ಕಿಂತ ಕಡಿಮೆಯಿದೆ ಎಂದು ತೈಲ ಕಂಪನಿಗಳಿಗೆ ತಿಳಿಸಿವೆ.
ತೈಲ ಕಂಪನಿಗಳ ವಿವಿಧ ಡಿಪೋಗಳು ಮತ್ತು ಟರ್ಮಿನಲ್‌ಗಳಿಂದ ಸಂಗ್ರಹಿಸಿದ 80ಕ್ಕೂ ಹೆಚ್ಚು ಮಾದರಿಗಳಲ್ಲಿಯೂ ಕ್ಲೋರೈಡ್ ಮಟ್ಟ 3 ಪಿಪಿಎಂಕ್ಕಿಂತ ಕೆಳಗಿರುವುದು ಕಂಡುಬಂದಿದೆ. ಸಾವಿರಕ್ಕೂ ಹೆಚ್ಚು ಸ್ಯಾಂಪಲ್‌ಗಳ ಪೈಕಿ ಈವರೆಗೆ ಪರೀಕ್ಷಿಸಲಾದ 160 ಮಾದರಿಗಳಲ್ಲಿ ಕ್ಲೋರೈಡ್ ಪ್ರಮಾಣ 0-3 ಪಿಪಿಎಂ ವ್ಯಾಪ್ತಿಯಲ್ಲಿದೆ. 4 ಕಡೆಗಳಲ್ಲಿ ಮಾತ್ರ ಕೊಂಚ ವ್ಯತ್ಯಾಸ ಕಂಡುಬಂದ ತಕ್ಷಣವೇ ಅವುಗಳ ಪೂರೈಕೆಯನ್ನು ಸ್ಥಗಿತಗೊಳಿಸಿ ಸೂಕ್ತ ತಾಂತ್ರಿಕ ಸರಿಪಡಿಸುವಿಕೆ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಅಂದಾಜು 90 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಭೂಗತ ಟ್ಯಾಂಕ್‌ಗಳನ್ನು ದಿನಕ್ಕೆ 8 ರಿಂದ 12 ಬಾರಿ ಕಡ್ಡಾಯವಾಗಿ ಪರಿಶೀಲಿಸಲಾಗುತ್ತಿದ್ದು, ಈವರೆಗೆ ಯಾವುದೇ ನೀರು ಸೋರಿಕೆ ಅಥವಾ ನೀರು ಮಿಶ್ರಣವಾಗಿರುವುದು ಕಂಡುಬಂದಿಲ್ಲ ಎಂದು ಕಂಪನಿಗಳು ಹೇಳಿವೆ.
ಇಂಧನದ ಗುಣಮಟ್ಟ ಖಚಿತಪಡಿಸಿಕೊಳ್ಳಲು ಮೊಬೈಲ್ ಪರೀಕ್ಷಾ ಪ್ರಯೋಗಾಲಯಗಳನ್ನು ನಿಯೋಜಿಸಲಾಗಿದೆ. ಸ್ವತಂತ್ರ ಪ್ರಯೋಗಾಲಯಗಳ ಮೂಲಕವೂ ಪರೀಕ್ಷಾ ವರದಿಗಳನ್ನು ಮರು ಪರಿಶೀಲಿಸಲಾಗುತ್ತಿದೆ. ಈ ಎಲ್ಲ ಪರೀಕ್ಷೆಗಳ ವಿವರವಾದ ಅಂಕಿ-ಅಂಶಗಳನ್ನು ‘ಸೆಂಟರ್ ಫಾರ್ ಹೈ ಟೆಕ್ನಾಲಜಿ’ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದು, ನಿಯಮಿತವಾಗಿ ನವೀಕರಿಸಲಾಗುತ್ತದೆ. ಸಾರ್ವಜನಿಕರು,ಗ್ರಾಹಕರು ಯಾವುದೇ ಆತಂಕವಿಲ್ಲದೆ ಇ-20 ಪೆಟ್ರೋಲ್ ಅನ್ನು ಬಳಸಬಹುದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಭರವಸೆ ನೀಡಿವೆ.