ಬೇಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ವಸೂಲಿಯಲ್ಲಿ ಉತ್ತಮ ಸಾಧನೆ ಮಾಡಿದ ಪಿಡಿಒಗಳನ್ನು ಸನ್ಮಾನಿಸಲಾಯಿತು.
- ತಾಲೂಕು ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ
- ಚನ್ನಕೇಶವಸ್ವಾಮಿ ದೇಗುಲ ಆವರಣದಿಂದ ಪಟ್ಟಣದ ಅಂಬೇಡ್ಕರ್ ಭವನದವರೆಗೆ ಜಾಗೃತಿ ಜಾಥಾ
ಬೇಲೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ತಾಲೂಕು ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿಯಿಂದ ಶುಕ್ರವಾರ ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಿಂದ ಪಟ್ಟಣದ ಅಂಬೇಡ್ಕರ್ ಭವನದವರೆಗೆ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಪಂಚಾಯಿತಿ ಸಿಇಒ ಶುಭಂ ಶುಕ್ಲ ಮಾತನಾಡಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು. ಯಾವುದೇ ಅನರ್ಹ ವ್ಯಕ್ತಿ ಪಟ್ಟಿಗೆ ಸೇರ್ಪಡೆಯಾಗಬಾರದು ಎಂಬುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶ. ಮನೆ ಮನೆಗೆ ಭೇಟಿ ನೀಡಿ ಅರ್ಜಿ ವಿತರಿಸುವುದು, ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಿ ಗ್ರಾಮ ಪಂಚಾಯಿತಿಯಲ್ಲಿ ದಾಖಲಿಸುವುದು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಜವಾಬ್ದಾರಿಯಾಗಿದೆ ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಮಟ್ಟದಲ್ಲಿ ಮತದಾರರ ಸಹಾಯವಾಣಿ ಕೇಂದ್ರ ಮತ್ತು ವಾರ್ ರೂಮ್‌ಗಳನ್ನು ಸ್ಥಾಪಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾ ಮೂಲಕ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ. 1993ರ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಮನೆ ತೆರಿಗೆ ಸೇರಿದಂತೆ ಸ್ಥಳೀಯ ತೆರಿಗೆಗಳನ್ನು ವಸೂಲಿ ಮಾಡುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗಷ್ಟೇ ಇದೆ. ತೆರಿಗೆಯಿಂದ ಸಂಗ್ರಹವಾಗುವ ಹಣ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಖಾತೆಗೆ ಜಮೆ ಮಾಡಿ ಸ್ಥಳೀಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮೇ 13ರಂದು ಜಿಲ್ಲೆಯ ತೆರಿಗೆ ವಸೂಲಾತಿ ಪ್ರಮಾಣ ಶೇ. 6.7 ರಿಂದ 7.3 ರಷ್ಟಿದ್ದು, ಜೂ.30ಕ್ಕೆ ಶೇ. 25ರ ಗುರಿ ನಿಗದಿಪಡಿಸಲಾಗಿತ್ತು. ಕಳೆದ ಆರು ವಾರಗಳಲ್ಲಿ ಜಿಲ್ಲೆಯ ಒಟ್ಟು ತೆರಿಗೆ ವಸೂಲಾತಿ ಶೇ.26.3ಕ್ಕೆ ಏರಿಕೆಯಾಗಿದ್ದು, ನಿಗದಿತ ಗುರಿಯನ್ನು ಮೀರಲಾಗಿದೆ. ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ಬೇಲೂರು ಸೇರಿದಂತೆ ಐದು ತಾಲೂಕುಗಳು ಶೇ. 25 ಕ್ಕಿಂತ ಹೆಚ್ಚು ಸಾಧನೆ ಮಾಡಿವೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿ ಪ್ರಸ್ತುತ ದಿನಗೂಲಿ 382 ರೂ.ಇದ್ದು, ವರ್ಷಕ್ಕೆ ಕನಿಷ್ಠ 125 ದಿನಗಳ ಉದ್ಯೋಗದ ಭರವಸೆ ನೀಡಲಾಗುತ್ತಿದೆ. ಈ ಯೋಜನೆ ಮೂಲಕ ಗ್ರಾಮೀಣ ಬಡ ಹಾಗೂ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ವರ್ಷಕ್ಕೆ 50,000 ರೂ.ವರೆಗೆ ಆದಾಯ ದೊರೆಯುವ ಸಾಧ್ಯತೆ ಇದೆ. ಯಾವುದೇ ವಿಶೇಷ ಕೌಶಲ ಅಗತ್ಯವಿಲ್ಲದ ಈ ಯೋಜನೆಯಲ್ಲಿ ಕೆಲಸ ಪೂರ್ಣಗೊಂಡ 15 ದಿನಗಳೊಳಗೆ ಕೂಲಿಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಪಿಡಿಒಗಳು ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದರು.
ತಹಸೀಲ್ದಾರ್ ಶ್ರೀಧರ್, ತಾಪಂ ಇಒ ಸತೀಶ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿದ್ದರು. ಇದೇ ಸಂದರ್ಭ ಗ್ರಾಪಂಗಳಲ್ಲಿ ಕಂದಾಯ ವಸೂಲಿಯಲ್ಲಿ ಉತ್ತಮ ಸಾಧನೆ ಮಾಡಿದ ಪಿಡಿಒಗಳನ್ನು ಪ್ರಶಂಸಾ ಪತ್ರಗಳೊಂದಿಗೆ ಸನ್ಮಾನಿಸಲಾಯಿತು.