ಕೆ.ಸಿ. ಜನರಲ್ ಆಸ್ಪತ್ರೆಯ ಉಪಶಮನ ಆರೈಕೆ ಕೇಂದ್ರ
- * ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
- * ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸೇವಾ ಕೇಂದ್ರಕ್ಕೆ ಚಾಲನೆ
ಬೆಂಗಳೂರು: ಚಿಕಿತ್ಸೆಗೆ ವೇಳೆ ಅಸಾಧಾರಣ ನೋವು, ಮಾನಸಿಕ ಒತ್ತಡಕ್ಕೆ ಒಳಗಾದ ರೋಗಿಗಳಿಗೆ ಉಪಶಮನ ಆರೈಕೆ ಸಹಕಾರಿಯಾಗಿದ್ದು, ಈ ಬಗೆಯ ಸೇವೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಉದ್ದೇಶವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸರನಂ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗಿರುವ ಉಪಶಮನ ಆರೈಕೆ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಉಪಶಮನ ಆರೈಕೆಯು ರೋಗಿಗಳಿಗೆ ಮತ್ತು ಅವರ ಆರೈಕೆ ಮಾಡುವ ಕುಟುಂಬ ವರ್ಗದವರಿಗೆ ವರದಾನವಾಗಲಿದೆ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ ಐದು ಹಾಸಿಗೆಗಳ ವಾರ್ಡ್ ನಿರ್ಮಾಣ ಮಾಡಲಾಗಿದೆ. ಮಾರಣಾಂತಿಕ ಅಥವಾ ಗಂಭೀರ ಕಾಯಿಲೆ ಎದುರಿಸುತ್ತಿರುವವರಿಗೆ ಈ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತದೆ. ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯದಂತಹ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾದವರು ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲದ ಹಂತದಲ್ಲಿ, ಈ ಕೇಂದ್ರಕ್ಕೆ ಭೇಟಿ ನೀಡಬಹುದು. ಇಲ್ಲಿ ರೋಗಿಗಳ ಕುಟುಂಬದವರಿಗೂ ಆರೈಕೆ ಬಗ್ಗೆ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೇಂದ್ರದಲ್ಲಿ ಹೊರರೋಗಿ ವಿಭಾಗ, ಡೇ ಕೇರ್ ವಿಭಾಗ (ಅತಿಯಾದ ನೋವು ನಿರ್ವಹಣೆ ಮತ್ತು ವೈಯಕ್ತಿಕ ಸಮಾಲೋಚನೆ) ಹಾಗೂ ಒಳರೋಗಿ ವಿಭಾಗ ಇರಲಿದೆ. ಕೆ.ಸಿ. ಜನರಲ್ ಆಸ್ಪತ್ರೆಯ ಸುತ್ತಮುತ್ತ 5ರಿಂದ 8 ಕಿ.ಮೀ. ವ್ಯಾಪ್ತಿಯಲ್ಲಿ ಮನೆಗೆ ತೆರಳಿ ಆರೈಕೆ ಮಾಡುವ ಮತ್ತು ತರಬೇತಿ ನೀಡುವ ವಾಹನ ಸಹ ಇರಲಿದೆ. ಮಾನವೀಯತೆ ದೃಷ್ಟಿಯಿಂದ ಈ ಸೇವೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಲಕ್ಷ್ಮೀಪತಿ, ಸರನಂ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.