ರಾಜ್ಯ

ಹೋಬಳಿ ಮಟ್ಟದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ

2ನೇ ಅಖಿಲ ಭಾರತ ಅಗ್ನಿಶಾಮಕ ಸೇವೆಗಳ ಕ್ರೀಡಾಕೂಟ ಉದ್ಘಾಟನೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಭಿಮತ

ಬೆಂಗಳೂರು: ರಾಜ್ಯದ ಎಲ್ಲ ತಾಲೂಕುಗಳು ಹಾಗೂ ಪ್ರಮುಖ ಹೋಬಳಿ ಮಟ್ಟದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬನ್ನೇರುಘಟ್ಟ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಗುರುವಾರ ಆಯೋಜಿಸಿದ್ದ 2ನೇ ಅಖಿಲ ಭಾರತ ಅಗ್ನಿಶಾಮಕ ಸೇವೆಗಳ ಕ್ರೀಡಾಕೂಟ-2026 ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ರಾಜ್ಯದ ಎಲ್ಲ ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಕೇಂದ್ರ ಸರ್ಕಾರದ ಆಶಯದಂತೆ ಹೊಸದಾಗಿ ಠಾಣೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಅಗ್ನಿ ಅವಘಡಗಳು ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಜನರಿಗೆ ತ್ವರಿತವಾಗಿ ನೆರವು ಒದಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಇಲಾಖೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಗತ್ಯವಿರುವ ಸೌಲಭ್ಯಗಳು, ಮೂಲಸೌಕರ್ಯ ಹಾಗೂ ಆರ್ಥಿಕ ನೆರವು ಒದಗಿಸುವ ಮೂಲಕ ಅದರ ಕಾರ್ಯನಿರ್ವಹಣೆ ಮತ್ತಷ್ಟು ಬಲಪಡಿಸಲಾಗುವುದು ಎಂದು ಭರವಸೆ ನೀಡಿದರು.

ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಸಚಿವರು, ಈ ಕ್ರೀಡಾಕೂಟವು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ನಡುವೆ ಸ್ನೇಹ, ಸಹಕಾರ, ಏಕತೆ ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ ಎಂದು ಆಶಿಸಿದರು.

ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ಸಹಜ. ಆದರೆ ಪ್ರಾಮಾಣಿಕತೆ, ಸಮರ್ಪಣೆ ಮತ್ತು ನ್ಯಾಯಯುತ ಆಟದ ಮೂಲಕ ಗಳಿಸುವ ಗೌರವವೇ ಅತ್ಯಂತ ಮೌಲ್ಯಯುತವಾದುದು. ಪದಕ ಮತ್ತು ಪ್ರಶಸ್ತಿಗಳನ್ನು ಗೆಲ್ಲಲು ಪ್ರಯತ್ನಿಸುವುದರ ಜತೆಗೆ ಉತ್ತಮ ಕ್ರೀಡಾಸ್ಫೂರ್ತಿ ಪ್ರದರ್ಶಿಸಿ ಎಂದು ಕಿವಿ ಮಾತು ಹೇಳಿದರು.

ಈ ವೇಳೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ. ನಂಜುಂಡಸ್ವಾಮಿ, ಉಪ ಮಹಾನಿರ್ದೇಶಕಿ ರೇಣುಕಾ ಕೆ. ಸುಕುಮಾರ್, ಅಗ್ನಿಶಾಮಕ ಸಲಹೆಗಾರ ಪ್ರಶಾಂತ್ ಲೋಂಕರ್ ಸೇರಿ ಹಿರಿಯ ಅಧಿಕಾರಿಗಳಿದ್ದರು.