Priyank Kharge | ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಿಂದ ಮೂರು ಖೈದಿಗಳು ತಪ್ಪಿಸಿಕೊಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸಂಬಂಧಪಟ್ಟ ಜೈಲಾಧಿಕಾರಿ ಹಾಗೂ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವ ಖರ್ಗೆ, ತಪ್ಪಿಸಿಕೊಂಡಿರುವ ಖೈದಿಗಳನ್ನು ಶೀಘ್ರವಾಗಿ ಸೆರೆಹಿಡಿಯಲು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು. ಇಲಾಖೆಯ ತೀವ್ರ ಕಾರ್ಯಾಚರಣೆಯ ಪರಿಣಾಮವಾಗಿ ಈಗಾಗಲೇ ಓರ್ವ ಖೈದಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ಜವಾಬ್ದಾರಿ ವಹಿಸಿಕೊಂಡ ನಂತರ ಇಲಾಖೆಯ ಪ್ರತಿ ವಿಭಾಗಗಳ ಪರಿಶೀಲನಾ ಸಭೆ ನಡೆಸಿ, ಆ ಎಲ್ಲಾ ವಿಭಾಗಗಳ ಬಲವರ್ಧನೆಗೆ ಮತ್ತು ಉನ್ನತೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತಾವೇ ಖುದ್ದಾಗಿ ರಾಜ್ಯದ ಎಲ್ಲಾ ಕಾರಾಗೃಹಗಳ ಸ್ಥಿತಿಗತಿಗಳನ್ನು ಮತ್ತು ಬಂಧಿಖಾನೆ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿರುವ ಸಚಿವರು, ಜೈಲುಗಳ ಸುಧಾರಣೆ, ಭದ್ರತಾ ವ್ಯವಸ್ಥೆಯ ಉನ್ನತೀಕರಣ ಹಾಗೂ ಜೈಲುಗಳ ಒಳಗಡೆ ನಡೆಯುವ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಬಿಜೆಪಿಗೆ ಇತಿಹಾಸ ನೆನಪಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಇದೇ ವೇಳೆ, ಸರ್ಕಾರದ ವಿರುದ್ಧ ಮುಗಿಬಿದ್ದಿರುವ ವಿರೋಧ ಪಕ್ಷ ಬಿಜೆಪಿಗೆ ತೀಕ್ಷ್ಣವಾಗಿ ಟಾಂಗ್ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾವಾಗಲೂ ಟೀಕೆ ಮಾಡಲು ಬಾಯ್ತೆರೆದು ಕುಳಿತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಆಡಳಿತ ಅವಧಿಯಲ್ಲಿ ರಾಜ್ಯದ ಜೈಲುಗಳ ಸ್ಥಿತಿ ಹೇಗಿತ್ತು ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡರೆ ಒಳಿತು ಎಂದು ತಿರುಗೇಟು ನೀಡಿದ್ದಾರೆ.
2010ರಲ್ಲಿ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ ಒಟ್ಟಿಗೆ 8 ಖೈದಿಗಳು ಪರಾರಿಯಾಗಿದ್ದರು. ರಾಜ್ಯದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಪ್ರಕರಣವಾಗಿದೆ. ಇದನ್ನು ಅಂದಿನ ಗೃಹ ಸಚಿವರ ವೈಫಲ್ಯ ಎಂದು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ಆಡಳಿತದ ಅವಧಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಖೈದಿಗಳ ಪಾಲಿಗೆ ಜೈಲಾಗಿರಲಿಲ್ಲ, ಬದಲಿಗೆ ಅದು ಅತಿಥಿ ಗೃಹವಾಗಿ ಬದಲಾಗಿತ್ತು. ಅಲ್ಲಿ ಖೈದಿಗಳಿಗೆ ಸಕಲ ಸವಲತ್ತುಗಳು ದೊರೆಯುತ್ತಿದ್ದ ಸುದ್ದಿಗಳನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರಾ ಎಂದು ಪ್ರಿಯಾಂಕ್ ಖರ್ಗೆ ಆಗಿ ಪ್ರಶ್ನಿಸಿದ್ದಾರೆ.