ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಕರ್ನಾಟಕ ಕಲಾ ಮಹಾವಿದ್ಯಾಲಯಕ್ಕೆ ಪ್ರಥಮ ಬಾರಿಗೆ ಯುರೋಪಿಯನ್ ಒಕ್ಕೂಟದ ಎರಾಸ್ಮಸ್ ಸಂಶೋಧನಾ ನಿಧಿಯನ್ನು ಪಡೆದಿದೆ. ಇದರಿಂದ ಪ್ರವಾಸೋದ್ಯಮ ಸಂಬಂಧಿತ ಸಂಶೋಧನೆ, ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ. ಖಾನ್ ಹೇಳಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಾಸ್ಮಸ್ ಯುರೋಪ್ನ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗಕ್ಕೆ ಸುಮಾರು 48 ಲಕ್ಷ ರೂಪಾಯಿ ಸಂಶೋಧನಾ ಧನಸಹಾಯ ದೊರೆಯಲಿದೆ. ವಿಭಾಗವು "ಹೈಯರ್ ಎಜುಕೇಷನ್ ಆ್ಯಂಡ್ ಸಸ್ಟೆನೇಬಲ್ ಗ್ರೋತ್ ಥ್ರೂ ರಿಲಿಜಿಯಸ್ ಟೂರಿಸಂ' ವಿಷಯದ ಮೇಲೆ ಸಂಶೋಧನಾ ಕಾರ್ಯ ಕೈಗೊಳ್ಳಲಿದೆ ಎಂದರು.
ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಪ್ರೊಜೆಕ್ಟ್ ಅಧಿಕಾರಿಯಾಗಿ ಈ ಸಂಶೋಧನಾ ಯೋಜನೆಯ ನೇತೃತ್ವ ವಹಿಸಲಿದ್ದಾರೆ. ಜತೆಗೆ 6 ಜನರ ಶಿಕ್ಷಕರ ತಂಡ ಈ ಕಾರ್ಯ ನಿರ್ವಹಿಸಲಿದೆ. ಅಲ್ಬೇನಿಯಾದಲ್ಲಿ ಜರುಗುವ ಯುರೋಪಿಯನ್ ಒಕ್ಕೂಟದ ಸಭೆಗೆ ಡಾ. ಜಗದೀಶ ತೆರಳಲಿದ್ದಾರೆ ಎಂದರು.